
ನವದೆಹಲಿ, 28 ಜುಲೈ 2026:
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶದ ವಾಹನ ಸವಾರರಿಗೆ ಭಾರಿ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಬಿಎಸ್-6 (BS6) ಮಾದರಿಯ ಹೊಸ ಹಾಗೂ 6 ವರ್ಷದೊಳಗಿನ ಖಾಸಗಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ ಸಿಂಧುತ್ವವನ್ನು ಹಾಲಿ ಇರುವ 1 ವರ್ಷದಿಂದ 3 ವರ್ಷಗಳಿಗೆ ಹೆಚ್ಚಿಸಲು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಈ ಹೊಸ ನಿಯಮದಿಂದಾಗಿ ಲಕ್ಷಾಂತರ ವಾಹನ ಮಾಲೀಕರು ಪ್ರತಿ ವರ್ಷ ಮಾಲಿನ್ಯ ತಪಾಸಣಾ ಕೇಂದ್ರಗಳಿಗೆ ಅಲೆಯುವ ಕಿರಿಕಿರಿಯಿಂದ ಮುಕ್ತಿ ಪಡೆಯಲಿದ್ದಾರೆ.
ಈ ಹೊಸ ಪ್ರಸ್ತಾವನೆಯ ಪ್ರಕಾರ, 6 ವರ್ಷ ಮೇಲ್ಪಟ್ಟ ಮತ್ತು 10 ವರ್ಷದೊಳಗಿನ ಬಿಎಸ್-6 ವಾಹನಗಳು ಪ್ರತಿ ವರ್ಷಕ್ಕೊಮ್ಮೆ ತಮ್ಮ ಮಾಲಿನ್ಯ ಪ್ರಮಾಣಪತ್ರವನ್ನು ನವೀಕರಿಸಬೇಕಾಗುತ್ತದೆ. ಹಾಗೆಯೇ 10 ವರ್ಷಕ್ಕಿಂತ ಹಳೆಯ ಬಿಎಸ್-6 ವಾಹನಗಳಿಗೆ ಪ್ರತಿ 6 ತಿಂಗಳಿಗೊಮ್ಮೆ ತಪಾಸಣೆ ಕಡ್ಡಾಯವಾಗಿರಲಿದೆ. ಬಿಎಸ್-6 ಎಂಜಿನ್ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಪರಿಸರಕ್ಕೆ ಅತಿ ಕಡಿಮೆ ಮಾಲಿನ್ಯವನ್ನು ಹೊರಸೂಸುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈ ವಿನಾಯಿತಿ ನೀಡಲು ನಿರ್ಧರಿಸಿದೆ.
ಮತ್ತೊಂದೆಡೆ, ಹಳೆಯ ಮಾದರಿಯ ವಾಹನಗಳ ಮಾಲಿನ್ಯ ತಡೆಗೆ ಸರ್ಕಾರ ಬಿಗಿಯಾದ ನಿಯಮಗಳನ್ನು ರೂಪಿಸಿದೆ. ಬಿಎಸ್-4 ವಾಹನಗಳ ಮಾಲೀಕರು ಪ್ರತಿ 6 ತಿಂಗಳಿಗೊಮ್ಮೆ ಮಾಲಿನ್ಯ ಪ್ರಮಾಣಪತ್ರ ಪಡೆಯಬೇಕಿದ್ದರೆ, ಬಿಎಸ್-1, ಬಿಎಸ್-2 ಮತ್ತು ಬಿಎಸ್-3 ಮಾದರಿಯ ಹಳೆಯ ವಾಹನಗಳಿಗೆ ಪ್ರತಿ 3 ತಿಂಗಳಿಗೊಮ್ಮೆ ಮಾಲಿನ್ಯ ತಪಾಸಣೆ ಮಾಡಿಸುವುದನ್ನು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ. ವಾಣಿಜ್ಯ ವಾಹನಗಳ ವಿಷಯದಲ್ಲೂ ನೂತನ ನಿಯಮಗಳನ್ನು ತರಲಾಗುತ್ತಿದ್ದು, ಸಾರ್ವಜನಿಕರ ಸಲಹೆಗಳ ನಂತರ ಇದು ಶೀಘ್ರದಲ್ಲೇ ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರದ ಈ ನಡೆಯು ವಾಹನ ಸವಾರರಿಗೆ ಸಮಯ ಮತ್ತು ಹಣ ಎರಡನ್ನೂ ಉಳಿಸಲು ನೆರವಾಗಲಿದೆ. ಪರಿಸರ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಜೊತೆಗೆ ಸಾರ್ವಜನಿಕರ ಮೇಲಿನ ಅನಗತ್ಯ ಹೊೆಯನ್ನು ತಗ್ಗಿಸುವುದು ಈ ನೂತನ ಮಾಲಿನ್ಯ ನಿಯಂತ್ರಣ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ದೇಶಾದ್ಯಂತ ಜಾರಿಯಾಗಲಿರುವ ಈ ಹೊಸ ನಿಯಮದ ಅಂತಿಮ ಆದೇಶಕ್ಕಾಗಿ ಸಾರ್ವಜನಿಕರು ಮತ್ತು ವಾಹನ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ.



