News

ಸೌಜನ್ಯಾ ಅತ್ಯಾಚಾರ–ಹತ್ಯೆ ಪ್ರಕರಣಕ್ಕೆ ಮತ್ತೆ ತನಿಖೆಯ ಬಿಸಿ: ಹಳೆಯ ಪ್ರಕರಣದ ಸತ್ಯಾಂಶ ಬಯಲಿಗೆಳೆಯಲು ತನಿಖಾಧಿಕಾರಿಗಳಿಂದ ಮಹತ್ವದ ಹೆಜ್ಜೆ!

ಬೆಳ್ತಂಗಡಿ, 31-10-2026 : ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇದೀಗ ಮತ್ತೆ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಶನಿವಾರ ಸೌಜನ್ಯಾಳ ಮೃತದೇಹ ಪತ್ತೆಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ಪ್ರಕ್ರಿಯೆ ಆರಂಭಿಸಿದೆ. 2012ರಲ್ಲಿ ನಡೆದಿದ್ದ ಈ ಪ್ರಕರಣದ ಕುರಿತು ಸತ್ಯಾಂಶಗಳನ್ನು ಮತ್ತೊಮ್ಮೆ ಪರಿಶೀಲಿಸುವ ನಿಟ್ಟಿನಲ್ಲಿ ಎಸ್ಐಟಿ ಅಧಿಕಾರಿಗಳ ಈ ಕ್ರಮ ಮಹತ್ವ ಪಡೆದುಕೊಂಡಿದೆ.

ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಮಣ್ಣಸಂಕದಲ್ಲಿ ಸೌಜನ್ಯಾ ನಾಪತ್ತೆಯಾಗಿದ್ದ ಸ್ಥಳ ಹಾಗೂ ಬಳಿಕ ಆಕೆಯ ಮೃತದೇಹ ಪತ್ತೆಯಾಗಿದ್ದ ಪ್ರದೇಶಕ್ಕೆ ತನಿಖಾಧಿಕಾರಿಗಳು ಭೇಟಿ ನೀಡಿದ್ದಾರೆ. ಅಂದಿನ ಘಟನೆಯ ಸ್ಥಳದ ಪರಿಸ್ಥಿತಿಗಳು, ಲಭ್ಯವಿರುವ ಮಾಹಿತಿಗಳು ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವ ಉದ್ದೇಶದಿಂದ ಸ್ಥಳ ಮಹಜರು ಪ್ರಕ್ರಿಯೆ ಕೈಗೊಳ್ಳಲಾಗಿದೆ.

ಎಸ್ಐಟಿ ತನಿಖಾಧಿಕಾರಿ ಹಾಗೂ ಐಪಿಎಸ್ ಅಧಿಕಾರಿ ಲೋಕೇಶ್ ಜಗಲಾಸರ್, ಎಸಿಪಿ ಮನೋಜ್ ಕುಮಾರ್ ಸೇರಿದಂತೆ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ, ಸೋಕೋ ತಂಡ, ವೈದ್ಯರ ತಂಡ, ಗ್ರಾಮ ಆಡಳಿತಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಲ್ಲದೆ, ಅಂದು ಸೌಜನ್ಯಾಳ ಮೃತದೇಹ ಪತ್ತೆಯಾದ ಸಂದರ್ಭದಲ್ಲಿ ದೂರು ನೀಡಿದ್ದ ಆಕೆಯ ಮಾವ ಪುರಂದರ ಗೌಡ ಹಾಗೂ ಸ್ಥಳ ಮಹಜರಿನ ಪಂಚರೂ ಹಾಜರಿದ್ದರು.

2012ರ ಅಕ್ಟೋಬರ್ 9ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 17 ವರ್ಷದ ಬಾಲಕಿ ಸೌಜನ್ಯಾಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ರಾಜ್ಯ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಇದೀಗ ತನಿಖೆ ಚುರುಕುಗೊಂಡಿದೆ. ಮುಂದಿನ ದಿನಗಳಲ್ಲಿ ಎಸ್ಐಟಿ ತನಿಖೆಯಿಂದ ಯಾವೆಲ್ಲ ಅಂಶಗಳು ಹೊರಬರಲಿವೆ ಎಂಬುದು ಸಾರ್ವಜನಿಕರ ಗಮನ ಸೆಳೆದಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft