
ಬೆಂಗಳೂರು, ಆ. 18: ಪ್ರಯಾಣಿಕರ ಸಂಚಾರಕ್ಕೆ ಯೋಗ್ಯವಲ್ಲ ಎಂದು ನಮೂದಿಸಲಾಗಿದ್ದ ಎಂಜಿನ್‌ವೊಂದನ್ನು ಹಾಸನ–ಸೋಲಾಪುರ ದೈನಂದಿನ ಎಕ್ಸ್‌ಪ್ರೆಸ್ ರೈಲಿಗೆ ಅಳವಡಿಸಿದ ಪರಿಣಾಮ, ರೈಲು ಮಾರ್ಗಮಧ್ಯೆಯೇ ಕೆಟ್ಟು ನಿಂತು ಪ್ರಯಾಣಿಕರು ಸುಮಾರು ನಾಲ್ಕು ಗಂಟೆಗಳ ಕಾಲ ಪರದಾಡಿದ ಘಟನೆ ರವಿವಾರ ನಡೆದಿದೆ.
ಹಾಸನದಿಂದ ರವಿವಾರ ಸಂಜೆ 4:15ಕ್ಕೆ ಹೊರಟ ರೈಲು ಸಂಜೆ 5:23ಕ್ಕೆ ಯಡಿಯೂರು ನಿಲ್ದಾಣ ತಲುಪಬೇಕಿತ್ತು. ಆದರೆ ಯಡಿಯೂರಿನಿಂದ ಸುಮಾರು ಮೂರು ಕಿ.ಮೀ. ಹಿಂದೆಯೇ ಎಂಜಿನ್ ಕೆಟ್ಟು ರೈಲು ನಿಂತಿದೆ. ಲೋಕೊಪೈಲಟ್ ಹಾಗೂ ರೈಲ್ವೆ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಿದ ಬಳಿಕ ರೈಲು ಯಡಿಯೂರು ನಿಲ್ದಾಣದವರೆಗೆ ತಲುಪಿದರೂ, ರಾತ್ರಿ 9 ಗಂಟೆ ದಾಟಿದರೂ ಅಲ್ಲಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ರೈಲಿಗೆ ಅಳವಡಿಸಿದ್ದ ಎಂಜಿನ್‌ನಲ್ಲಿ ‘ನಾಟ್ ಫಿಟ್ ಫಾರ್ ಪ್ಯಾಸೆಂಜರ್/ಗೂಡ್ಸ್’ ಎಂಬ ಸೂಚನೆ ಕಂಡುಬಂದಿದ್ದರಿಂದ ಪ್ರಯಾಣಿಕರಲ್ಲಿ ಆಕ್ರೋಶ ವ್ಯಕ್ತವಾಯಿತು. ಬದಲಿ ಎಂಜಿನ್ ಬರಲಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ನಿಲ್ದಾಣದಲ್ಲಿ ಕಾಯುವಂತಾಯಿತು. ಕೆಲ ಪ್ರಯಾಣಿಕರು ಸಿಬ್ಬಂದಿಯನ್ನು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಕೊನೆಗೆ ರಾತ್ರಿ 9:05ರ ಸುಮಾರಿಗೆ ಬದಲಿ ಎಂಜಿನ್ ಬಂದಿದ್ದು, ಅದನ್ನು ಅಳವಡಿಸಿದ ಬಳಿಕ ರೈಲು ಮತ್ತೆ ಸಂಚಾರ ಆರಂಭಿಸಿತು. ಸೋಲಾಪುರಕ್ಕೆ ತೆರಳುವ ಈ ರೈಲಿನಲ್ಲಿ ನೆಲಮಂಗಲ ಹಾಗೂ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರುವುದರಿಂದ ವಿಳಂಬದಿಂದ ಹಲವರು ತೀವ್ರ ತೊಂದರೆ ಅನುಭವಿಸಿದ್ದಾರೆ. ಫಿಟ್‌ನೆಸ್ ಇಲ್ಲದ ಎಂಜಿನ್ ಅನ್ನು ಪ್ರಯಾಣಿಕರ ರೈಲಿಗೆ ಅಳವಡಿಸಿದ್ದು ಹೇಗೆ ಎಂಬ ಪ್ರಶ್ನೆ ಇದೀಗ ರೈಲ್ವೆ ಇಲಾಖೆಯ ಕಾರ್ಯವೈಖರಿ ಮತ್ತು ಪ್ರಯಾಣಿಕರ ಸುರಕ್ಷತೆಯ ಕುರಿತು ಚರ್ಚೆಗೆ ಕಾರಣವಾಗಿದೆ.



