
ಚೀನಾ, ಸೆಪ್ಟೆಂಬರ್ 11 : ಮಹಿಳಾ ಜೂನಿಯರ್ ಹಾಕಿ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಯುವ ಆಟಗಾರ್ತಿಯರು ಅದ್ಭುತ ಪ್ರದರ್ಶನ ನೀಡಿ ಪಾಕಿಸ್ತಾನ ತಂಡವನ್ನು 19-0 ಗೋಲುಗಳ ಭಾರೀ ಅಂತರದಿಂದ ಮಣಿಸಿ ಸೆಮಿಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿದ್ದಾರೆ. ಚೀನಾದ ಮೋಕಿಯಲ್ಲಿ ನಡೆದ ಈ ಪಂದ್ಯದಲ್ಲಿ ಆರಂಭದಿಂದಲೇ ಸಂಪೂರ್ಣ ಮೇಲುಗೈ ಸಾಧಿಸಿದ ಭಾರತ, ಎದುರಾಳಿ ತಂಡಕ್ಕೆ ಯಾವುದೇ ಅವಕಾಶ ನೀಡಲಿಲ್ಲ.
ಪಂದ್ಯದಲ್ಲಿ ಭಾರತದ ಪರ ಒಟ್ಟು 13 ಆಟಗಾರ್ತಿಯರು ಗೋಲು ದಾಖಲಿಸಿದ್ದು, ಪೂಜಾ ಮಲಿಕ್ ಹ್ಯಾಟ್ರಿಕ್ ಸಾಧಿಸಿ ಗಮನ ಸೆಳೆದರು. ರೋಷನಿ ಐಂದ್, ಸಾನಿಕಾ ಚಂದ್ರಕಾಂತ್ ಮಾನೆ, ಮಧು ಸಿದಾರ್ ಮತ್ತು ಸುಪ್ರಿಯಾ ತಲಾ ಎರಡು ಗೋಲುಗಳನ್ನು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲಾರ್ಧದ ಅಂತ್ಯಕ್ಕೆ ಭಾರತ 10-0 ಮುನ್ನಡೆ ಸಾಧಿಸಿದ್ದರೆ, ದ್ವಿತೀಯಾರ್ಧದಲ್ಲೂ ದಾಳಿಯ ಆಟ ಮುಂದುವರಿಸಿ ಒಟ್ಟು 19 ಗೋಲುಗಳನ್ನು ದಾಖಲಿಸಿತು.
ಈ ಟೂರ್ನಿಯಲ್ಲಿ ಭಾರತ ಇದುವರೆಗೆ ಅಜೇಯ ಸಾಧನೆ ಮುಂದುವರಿಸಿದ್ದು, ಜಪಾನ್, ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ವಿರುದ್ಧವೂ ಭರ್ಜರಿ ಜಯ ದಾಖಲಿಸಿದೆ. ಚೀನಾ ವಿರುದ್ಧದ ಪಂದ್ಯ ಡ್ರಾಗೊಂಡಿದ್ದರೂ ಉತ್ತಮ ಗೋಲು ಅಂತರದ ಆಧಾರದ ಮೇಲೆ ಭಾರತ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು.
2023 ಮತ್ತು 2024ರ ಆವೃತ್ತಿಗಳಲ್ಲಿ ಚಾಂಪಿಯನ್ ಆಗಿದ್ದ ಭಾರತ, ಇದೀಗ ಸತತ ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಸೆಮಿಫೈನಲ್‌ನಲ್ಲಿ ಮತ್ತೊಂದು ಸವಾಲಿಗೆ ಸಜ್ಜಾಗಿದೆ. ಯುವ ಆಟಗಾರ್ತಿಯರ ಈ ಅಮೋಘ ಪ್ರದರ್ಶನ ಭಾರತೀಯ ಹಾಕಿಯ ಭವಿಷ್ಯದ ಮೇಲೆ ಹೊಸ ಭರವಸೆ ಮೂಡಿಸಿದೆ.



