
ಲಂಡನ್, ಆಗಸ್ಟ್ 28: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಮಾಜಿ ಪಾಕಿಸ್ತಾನ ಪ್ರಧಾನಿ ಹಾಗೂ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಪುತ್ರರಾದ ಸುಲೈಮಾನ್ ಮತ್ತು ಕಾಸಿಮ್ ಖಾನ್ ಅವರ ಸಂದರ್ಶನ ಪ್ರಸಾರವಾದ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ಲಾರ್ಡ್ಸ್ನಲ್ಲಿ ನಡೆಯುತ್ತಿದ್ದ ಪಂದ್ಯದ ಮಧ್ಯಂತರದಲ್ಲಿ ಸ್ಕೈ ಸ್ಪೋರ್ಟ್ಸ್ ಪ್ರಸಾರ ಮಾಡಿದ ಈ ಸಂದರ್ಶನಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ಅಥರ್ಟನ್ ನಡೆಸಿದ ಸುಮಾರು 18 ನಿಮಿಷಗಳ ಸಂದರ್ಶನದಲ್ಲಿ ಇಮ್ರಾನ್ ಖಾನ್ ಅವರ ಆರೋಗ್ಯ ಹಾಗೂ ಜೈಲು ಪರಿಸ್ಥಿತಿ ಕುರಿತು ಅವರ ಪುತ್ರರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ತಂದೆಯ ಸ್ಥಿತಿ ಹದಗೆಡುತ್ತಿದೆ ಮತ್ತು ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ಮಾನವೀಯ ಪರಿಸ್ಥಿತಿ ದೊರೆಯುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂದರ್ಶನವನ್ನು ಪಂದ್ಯದ ವೇಳೆ ಪ್ರಸಾರ ಮಾಡಿರುವುದಕ್ಕೆ ಪಿಸಿಬಿ ಆಕ್ಷೇಪ ವ್ಯಕ್ತಪಡಿಸಿತು.
ವರದಿಗಳ ಪ್ರಕಾರ, ಸಂದರ್ಶನ ಪ್ರಸಾರವಾದರೆ ಪಾಕಿಸ್ತಾನ ತಂಡದ ಆಟಗಾರರು ಊಟದ ವಿರಾಮದ ಬಳಿಕ ಮತ್ತೆ ಮೈದಾನಕ್ಕಿಳಿಯದಂತೆ ಮಾಡುವುದಾಗಿ ಪಿಸಿಬಿ ಎಚ್ಚರಿಕೆ ನೀಡಿತ್ತು. ಪರಿಣಾಮವಾಗಿ ಪಂದ್ಯ ಮುಂದುವರಿಯುವುದೇ ಅನುಮಾನ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಷಯ ಗಂಭೀರವಾಗುತ್ತಿದ್ದಂತೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮಧ್ಯಪ್ರವೇಶಿಸಿದ್ದು, ಅಂತಿಮವಾಗಿ ಪಾಕಿಸ್ತಾನ ತಂಡ ಮೈದಾನಕ್ಕಿಳಿದು ಪಂದ್ಯ ಮುಂದುವರಿಸಿತು.
ಈ ಘಟನೆಯ ಬೆನ್ನಲ್ಲೇ ಪಿಸಿಬಿ ಸ್ಕೈ ಸ್ಪೋರ್ಟ್ಸ್ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದೆ. ಕ್ರಿಕೆಟ್ ಪಂದ್ಯದ ಪ್ರಸಾರದ ವೇಳೆ ರಾಜಕೀಯ ವಿಚಾರಗಳನ್ನು ಒಳಗೊಂಡ ಸಂದರ್ಶನ ಪ್ರಸಾರ ಮಾಡಿರುವುದರ ಬಗ್ಗೆ ಪಿಸಿಬಿ ಅಸಮಾಧಾನ ವ್ಯಕ್ತಪಡಿಸಿದೆ. ಇತ್ತ, ಇಮ್ರಾನ್ ಖಾನ್ ಅವರ ಪುತ್ರರ ಆರೋಪಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಕ್ರಿಕೆಟ್ ಪಂದ್ಯವೊಂದು ಮಾಜಿ ಕ್ರಿಕೆಟಿಗನ ರಾಜಕೀಯ ಹಾಗೂ ವೈಯಕ್ತಿಕ ವಿಚಾರದ ವಿವಾದಕ್ಕೆ ವೇದಿಕೆಯಾಗಿರುವುದು ಗಮನ ಸೆಳೆದಿದೆ.



