
ಬೀಜಿಂಗ್, ಆ. 28: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಶುಕ್ರವಾರ 5.1 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಇದರ ಬೆನ್ನಲ್ಲೇ ನೆರೆಯ ನೇಪಾಳದಲ್ಲಿ ಮತ್ತೆ ಪ್ರವಾಹದ ಆತಂಕ ಎದುರಾಗಿದೆ. ಚೀನಾ ಭೂಕಂಪ ಜಾಲ ಕೇಂದ್ರದ ಪ್ರಕಾರ, ನೈರುತ್ಯ ಚೀನಾದ ಸಿಚುವಾನ್‌ನ ಲಾಂಗ್‌ಚಾಂಗ್ ನಗರದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ.
ಭೂಕಂಪನದ ಹಿನ್ನೆಲೆಯಲ್ಲಿ ನೇಪಾಳದ ತ್ರಿಶೂಲಿ ಪ್ರದೇಶದಲ್ಲಿ ನದಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಮೇಲ್ಭಾಗದಿಂದ ಹೆಚ್ಚಿನ ಪ್ರಮಾಣದ ನೀರು ಹರಿದುಬರುವ ಸಾಧ್ಯತೆ ಇರುವುದರಿಂದ ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ತೆರವುಗೊಳಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
ಇದರ ನಡುವೆ ಟಿಬೆಟ್ ಭಾಗದಲ್ಲಿರುವ ಅಣೆಕಟ್ಟು ಮತ್ತೆ ಒಡೆದಿರುವ ಕುರಿತು ನೇಪಾಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದ ನೀರು ಹರಿದುಬಂದರೆ ನದಿಯ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ತ್ರಿಶೂಲಿ ಸೇರಿದಂತೆ ಅಪಾಯದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿ ಹಾಗೂ ರಕ್ಷಣಾ ಕಾರ್ಯಕರ್ತರು ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೇಪಾಳ ಪೊಲೀಸರು ಮನವಿ ಮಾಡಿದ್ದಾರೆ. ಇತ್ತೀಚಿನ ಪ್ರವಾಹ ಪರಿಸ್ಥಿತಿಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಪ್ರದೇಶದಲ್ಲಿ ಭೂಕಂಪನ ಮತ್ತು ಹೊಸ ಪ್ರವಾಹದ ಮುನ್ನೆಚ್ಚರಿಕೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.



