
ಸ್ಥಳ, ದಿನಾಂಕ : ತಿರುವನಂತಪುರಂ, ಸೆಪ್ಟೆಂಬರ್ 19 :
ಶಾಲೆಯಲ್ಲಿ ಉದ್ದ ಕೂದಲು ಇಟ್ಟುಕೊಂಡಿದ್ದಾನೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವುದು, ತರಗತಿಯಿಂದ ಹೊರಹಾಕುವುದು ಅಥವಾ ಮಾನಸಿಕವಾಗಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸೂಚಿಸಿದೆ. ಹುಡುಗರು ಸೇರಿದಂತೆ ತಮ್ಮ ಲಿಂಗ ಗುರುತನ್ನು ನಿರ್ದಿಷ್ಟಪಡಿಸದ ಮಕ್ಕಳು ತಮ್ಮ ಇಚ್ಛೆಯಂತೆ ಕೂದಲನ್ನು ಬೆಳೆಸುವ ಹಕ್ಕು ಹೊಂದಿದ್ದಾರೆ ಎಂದು ಆಯೋಗ ತಿಳಿಸಿದೆ.
ಶಾಲೆಗಳು ವಿದ್ಯಾರ್ಥಿಗಳ ಕೂದಲಿನ ಉದ್ದದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಅಥವಾ ಯಾವುದೇ ಶಿಕ್ಷಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ಆಯೋಗ ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳ ಹೊರನೋಟಕ್ಕಿಂತ ಅವರ ಶೈಕ್ಷಣಿಕ ಪ್ರಗತಿ, ವ್ಯಕ್ತಿತ್ವ ವಿಕಸನ ಮತ್ತು ಕಲಿಕೆಯ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದೆ.
ಆದರೆ ವಿದ್ಯಾರ್ಥಿಗಳು ಕೂದಲನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸಬೇಕು. ಕಣ್ಣು ಅಥವಾ ಮುಖಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಪ್ರಯೋಗಾಲಯ, ಕ್ರೀಡಾಕೂಟ ಹಾಗೂ ಪ್ರಾಯೋಗಿಕ ತರಗತಿಗಳ ವೇಳೆ ಸುರಕ್ಷತೆಯ ದೃಷ್ಟಿಯಿಂದ ಉದ್ದ ಕೂದಲನ್ನು ಕಟ್ಟಿಕೊಳ್ಳಬೇಕು ಅಥವಾ ಹೇರ್‌ಬ್ಯಾಂಡ್ ಬಳಸಿ ಭದ್ರಪಡಿಸಿಕೊಳ್ಳಬೇಕು. ಆರೋಗ್ಯಕ್ಕೆ ಹಾನಿಯಾಗುವಂತಹ ರಾಸಾಯನಿಕಗಳು ಅಥವಾ ಹೇರ್ ಕಲರ್‌ಗಳನ್ನು ಬಳಸುವುದರ ಬಗ್ಗೆಯೂ ಆಯೋಗ ಎಚ್ಚರಿಕೆ ನೀಡಿದೆ.
ಶಾಲಾ ವಿದ್ಯಾರ್ಥಿಗಳ ಕೂದಲಿನ ಉದ್ದಕ್ಕೆ ಸಂಬಂಧಿಸಿದಂತೆ ರಾಜ್ಯ ಶಿಕ್ಷಣ ಇಲಾಖೆ ಅಥವಾ ಸಿಬಿಎಸ್‌ಇಯಿಂದ ಸ್ಪಷ್ಟ ಮಾರ್ಗಸೂಚಿಗಳಿಲ್ಲದಿರುವುದನ್ನು ಆಯೋಗ ಗಮನಿಸಿದೆ. ಆದ್ದರಿಂದ ಈ ಕುರಿತು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವಂತೆ ಸೂಚಿಸಿದ್ದು, ನಿಯಮಗಳನ್ನು ರೂಪಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯವನ್ನೂ ಪರಿಗಣಿಸಬೇಕು ಎಂದು ತಿಳಿಸಿದೆ. ಆಯೋಗದ ಈ ಸೂಚನೆಗಳು ಶಾಲೆಗಳಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ಸ್ವಾತಂತ್ರ್ಯ, ಸಮಾನತೆ ಮತ್ತು ಗೌರವಕ್ಕೆ ಹೆಚ್ಚಿನ ಮಹತ್ವ ನೀಡುವ ಚರ್ಚೆಗೆ ಕಾರಣವಾಗಿವೆ.



