
ಗುರುಗ್ರಾಮ, ಸೆಪ್ಟೆಂಬರ್ 19 : ಜರ್ಮನಿಯ ಕ್ರೀಡಾ ಉಡುಪು ತಯಾರಿಕಾ ದೈತ್ಯ ಅಡಿಡಾಸ್ ಭಾರತದಲ್ಲಿನ ತನ್ನ ತಂತ್ರಜ್ಞಾನ ವಿಭಾಗದಲ್ಲಿ ಹಲವು ಹುದ್ದೆಗಳನ್ನು ಕಡಿತಗೊಳಿಸಿದೆ. ಗುರುಗ್ರಾಮದಲ್ಲಿರುವ ಇಂಡಿಯಾ ಟೆಕ್ ಹಬ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ಗಳು, ಡೇಟಾ ಸೈಂಟಿಸ್ಟ್ಗಳು ಮತ್ತು ಡೇಟಾ ಇಂಜಿನಿಯರ್ಗಳು ಸೇರಿದಂತೆ ಹಲವು ಸಿಬ್ಬಂದಿ ಈ ಪುನರ್ರಚನೆಯಿಂದ ಪ್ರಭಾವಿತರಾಗಿದ್ದಾರೆ. ಸೆಪ್ಟೆಂಬರ್ 15ರಂದು ನಡೆದ ಟೌನ್ ಹಾಲ್ ಸಭೆಯಲ್ಲಿ ಉದ್ಯೋಗಿಗಳಿಗೆ ಈ ನಿರ್ಧಾರವನ್ನು ತಿಳಿಸಲಾಗಿದೆ.
ಅಡಿಡಾಸ್ ಅಧಿಕೃತವಾಗಿ ಉದ್ಯೋಗ ಕಡಿತವನ್ನು ದೃಢಪಡಿಸಿದೆಯಾದರೂ, ನಿಖರವಾಗಿ ಎಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಕಂಪೆನಿಯ ಪ್ರಕಾರ, ಭಾರತದಲ್ಲಿನ ತನ್ನ ಒಟ್ಟು ಟೆಕ್ನಾಲಜಿ ಸಂಸ್ಥೆಯ ಶೇ.20ಕ್ಕಿಂತ ಕಡಿಮೆ ಉದ್ಯೋಗಿಗಳ ಮೇಲೆ ಈ ಬದಲಾವಣೆ ಪರಿಣಾಮ ಬೀರಿದೆ. ಆದರೆ, ಕೆಲವು ವರದಿಗಳಲ್ಲಿ ಗುರುಗ್ರಾಮದ ಸುಮಾರು 700 ಸಿಬ್ಬಂದಿ ಇರುವ ಟೆಕ್ ಹಬ್ನಲ್ಲಿ 350ಕ್ಕೂ ಹೆಚ್ಚು ಮಂದಿಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ. ಈ ಸಂಖ್ಯೆಗಳನ್ನು ಅಡಿಡಾಸ್ ದೃಢಪಡಿಸಿಲ್ಲ.
ಉದ್ಯೋಗ ಕಡಿತಕ್ಕೆ ಕಾರಣವಾಗಿ ಬದಲಾಗುತ್ತಿರುವ ವ್ಯವಹಾರ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯಾಚರಣಾ ಮಾದರಿಯನ್ನು ಸರಳೀಕರಿಸುವುದು ಮತ್ತು ಪ್ರಮುಖ ಸಾಮರ್ಥ್ಯಗಳನ್ನು ಬಲಪಡಿಸುವುದಾಗಿ ಅಡಿಡಾಸ್ ತಿಳಿಸಿದೆ. ಕೆಲವು ಉದ್ಯೋಗಿಗಳಿಗೆ ಸೆಪ್ಟೆಂಬರ್ 15ರಂದೇ ಎಕ್ಸಿಟ್ ಲೆಟರ್ ನೀಡಲಾಗಿದೆ ಎಂದು ವರದಿಯಾಗಿದ್ದು, ಮತ್ತೊಂದು ಗುಂಪಿನ ಉದ್ಯೋಗಿಗಳಿಗೆ ಡಿಸೆಂಬರ್ 15ರವರೆಗೆ ಮುಂದುವರಿಯಲು ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಇತರ ತಂತ್ರಜ್ಞಾನ ಕೇಂದ್ರಗಳಿಗೆ ಕೆಲಸದ ಹೊಣೆಗಾರಿಕೆ ಹಸ್ತಾಂತರಿಸುವುದರ ಜೊತೆಗೆ ಕಂಪೆನಿಯೊಳಗಿನ ಬೇರೆ ಹುದ್ದೆಗಳನ್ನು ಹುಡುಕಿಕೊಳ್ಳುವ ಅವಕಾಶ ನೀಡಲಾಗಿದೆ.
ಭಾರತವು ಅಡಿಡಾಸ್ಗೆ ಪ್ರಮುಖ ಮಾರುಕಟ್ಟೆಯಾಗಿ ಮುಂದುವರಿಯಲಿದೆ ಎಂದು ಕಂಪೆನಿ ಹೇಳಿದೆ. ಗುರುಗ್ರಾಮ ಮತ್ತು ಚೆನ್ನೈ ತಂತ್ರಜ್ಞಾನ ಕೇಂದ್ರಗಳಲ್ಲಿ ಸುಮಾರು 650 ಮಂದಿ ಕೆಲಸ ಮಾಡುತ್ತಿದ್ದು, 2024ರಲ್ಲಿ ಚೆನ್ನೈನಲ್ಲಿ ಅಡಿಡಾಸ್ ಜಾಗತಿಕ ವ್ಯಾಪಾರ ಸೇವಾ ಕೇಂದ್ರವನ್ನೂ ಆರಂಭಿಸಿತ್ತು. ಹೀಗಾಗಿ ಇತ್ತೀಚಿನ ಉದ್ಯೋಗ ಕಡಿತವು ಭಾರತದಿಂದ ಸಂಸ್ಥೆ ಸಂಪೂರ್ಣವಾಗಿ ಹಿಂದೆ ಸರಿಯುತ್ತಿರುವ ಸೂಚನೆಯಲ್ಲ; ಬದಲಾಗಿ ತಂತ್ರಜ್ಞಾನ ಕಾರ್ಯಾಚರಣೆಯ ಪುನರ್ರಚನೆಯ ಭಾಗವಾಗಿದೆ ಎಂದು ಕಂಪೆನಿಯ ಹೇಳಿಕೆಯಿಂದ ತಿಳಿದುಬರುತ್ತದೆ.



