
ಕಠ್ಮಂಡು, ಸೆ. 1: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಉಂಟಾದ ದುರಂತದಲ್ಲಿ ಸಾವಿನ ಸಂಖ್ಯೆ 1,000 ದಾಟಿದೆ. ನೇಪಾಳದಲ್ಲಿ 987 ಮಂದಿ ಹಾಗೂ ಟಿಬೆಟ್ನಲ್ಲಿ 16 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.
ಆಗಸ್ಟ್ 26ರಂದು ಹಿಮನದಿ ಕುಸಿತದಿಂದ ಉಂಟಾದ ಭಾರೀ ಪ್ರವಾಹವು ಹಲವು ಪ್ರದೇಶಗಳಲ್ಲಿ ಮನೆಗಳು, ರಸ್ತೆಗಳು, ಸೇತುವೆಗಳು ಹಾಗೂ ಇತರ ಮೂಲಸೌಕರ್ಯಗಳನ್ನು ಕೊಚ್ಚಿಕೊಂಡು ಹೋಗಿದೆ. ನೇಪಾಳದಲ್ಲಿ 11,814ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವವರ ಪತ್ತೆಗಾಗಿ ಸೇನೆ, ಭದ್ರತಾ ಪಡೆಗಳು ಹಾಗೂ ರಕ್ಷಣಾ ತಂಡಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ 900ಕ್ಕೂ ಅಧಿಕ ಕಾರ್ಮಿಕರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು 500 ಮಂದಿ ಸುರಂಗಗಳೊಳಗೆ ಸಿಲುಕಿರುವ ಸಾಧ್ಯತೆಯಿದೆ. ಹೀಗಾಗಿ ಸುರಂಗಗಳಲ್ಲಿನ ರಕ್ಷಣಾ ಕಾರ್ಯಾಚರಣೆಗೆ ವಿಶೇಷ ಗಮನ ನೀಡಲಾಗುತ್ತಿದೆ. ಹೆಲಿಕಾಪ್ಟರ್ಗಳ ಮೂಲಕ ಸಿಲುಕಿರುವವರನ್ನು ಸ್ಥಳಾಂತರಿಸುವುದು ಹಾಗೂ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯವೂ ಮುಂದುವರಿದಿದೆ.
ಈ ನಡುವೆ ನೇಪಾಳದ ಹಲವು ಜಿಲ್ಲೆಗಳಲ್ಲಿ ನದಿಗಳು ಹಾಗೂ ಹಳ್ಳಗಳಲ್ಲಿ ನೀರಿನ ಮಟ್ಟ ಮತ್ತೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಭೀಕರ ದುರಂತದಿಂದ ತತ್ತರಿಸಿರುವ ಪ್ರದೇಶಗಳಲ್ಲಿ ಮತ್ತಷ್ಟು ಪ್ರವಾಹದ ಆತಂಕ ಎದುರಾಗಿದ್ದು, ರಕ್ಷಣಾ ತಂಡಗಳು ಕಟ್ಟೆಚ್ಚರದಲ್ಲಿವೆ.



