News

ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು!! : ಪ್ರಶ್ನೆಪತ್ರಿಕೆಗಳಲ್ಲಿ ಹಲವು ದೋಷ, UGC-NET ಮೂರು ವಿಷಯಗಳಿಗೆ ಮರು ಪರೀಕ್ಷೆ

ನವದೆಹಲಿ, ಆ.17: ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತೊಮ್ಮೆ ಎಡವಟ್ಟಿಗೆ ಸಿಲುಕಿದೆ. 2026ರ ಜೂನ್‌ನಲ್ಲಿ ನಡೆದ UGC-NET ಪರೀಕ್ಷೆಯ ಇಂಗ್ಲಿಷ್, ಕಾಮರ್ಸ್ ಮತ್ತು ಸಮಾಜಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ಹಲವು ವಾಸ್ತವಾಂಶ, ಮುದ್ರಣ, ಭಾಷಾಂತರ ಹಾಗೂ ವ್ಯಾಕರಣ ದೋಷಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಮೂರು ವಿಷಯಗಳಿಗೆ ಮರು ಪರೀಕ್ಷೆ ನಡೆಸಲು NTA ನಿರ್ಧರಿಸಿದೆ.

ಅಭ್ಯರ್ಥಿಗಳಿಂದ ಬಂದ ಹಲವು ದೂರುಗಳ ಹಿನ್ನೆಲೆಯಲ್ಲಿ NTA ಸಮಿತಿಯೊಂದನ್ನು ರಚಿಸಿ ಪ್ರಶ್ನೆಪತ್ರಿಕೆಗಳನ್ನು ಪರಿಶೀಲಿಸಿತ್ತು. ಈ ವೇಳೆ ಪ್ರಮುಖ ವಿದ್ವಾಂಸರ ಹೆಸರುಗಳ ತಪ್ಪು ಬರವಣಿಗೆ, ಪುಸ್ತಕಗಳ ಶೀರ್ಷಿಕೆಗಳಲ್ಲಿನ ದೋಷ, ಪ್ರಶ್ನೆಗಳ ರಚನೆಯಲ್ಲಿ ತಪ್ಪು, ವ್ಯಾಕರಣ ಹಾಗೂ ವಿರಾಮಚಿಹ್ನೆಗಳ ದೋಷ ಸೇರಿದಂತೆ ಹಲವು ಸಮಸ್ಯೆಗಳು ಪತ್ತೆಯಾಗಿವೆ. ಕೆಲವು ಪ್ರಶ್ನೆಗಳು ಹಿಂದಿನ ಪರೀಕ್ಷೆಗಳಲ್ಲಿ ಕೇಳಲಾಗಿದ್ದ ಪ್ರಶ್ನೆಗಳೊಂದಿಗೆ ಪುನರಾವರ್ತನೆಯಾಗಿರುವುದೂ ಸಮಿತಿಯ ಗಮನಕ್ಕೆ ಬಂದಿದೆ.

NTA ಪ್ರಕಟಿಸಿರುವ ವೇಳಾಪಟ್ಟಿಯಂತೆ ಇಂಗ್ಲಿಷ್ ಮತ್ತು ಕಾಮರ್ಸ್ ವಿಷಯಗಳ ಮರು ಪರೀಕ್ಷೆ ಸೆಪ್ಟೆಂಬರ್ 9ರಂದು ನಡೆಯಲಿದ್ದು, ಸಮಾಜಶಾಸ್ತ್ರದ ಪರೀಕ್ಷೆ ಸೆಪ್ಟೆಂಬರ್ 10ರಂದು ನಡೆಯಲಿದೆ. ಮರು ಪರೀಕ್ಷೆಗೆ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕವನ್ನು ಪಡೆಯುವುದಿಲ್ಲ ಎಂದು NTA ಸ್ಪಷ್ಟಪಡಿಸಿದೆ. ಈ ಮರು ಪರೀಕ್ಷೆಯ ಪರಿಣಾಮ ಉಳಿದ 84 ವಿಷಯಗಳ ಫಲಿತಾಂಶ ಪ್ರಕ್ರಿಯೆಯ ಮೇಲೆ ಬೀರುವುದಿಲ್ಲ.

ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿನ ಇಂತಹ ನಿರಂತರ ದೋಷಗಳು ವಿದ್ಯಾರ್ಥಿಗಳು ಮತ್ತು ಪರೀಕ್ಷಾರ್ಥಿಗಳಲ್ಲಿ ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಪರೀಕ್ಷೆಗೆ ತಿಂಗಳುಗಳ ಕಾಲ ಸಿದ್ಧತೆ ನಡೆಸುವ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಯ ದೋಷಗಳಿಂದಾಗಿ ಮತ್ತೆ ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ಎದುರಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ. UGC-NETನಂತಹ ಪ್ರಮುಖ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹಂತದಲ್ಲೇ ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft