ಬೆಂಗಳೂರು, ಸೆಪ್ಟೆಂಬರ್ 2: ದೇಶದಲ್ಲಿ ಚಿನ್ನದ ಬೆಲೆ ಮತ್ತೊಮ್ಮೆ ಇಳಿಕೆಯಾಗಿದ್ದು, ಚಿನ್ನ ಖರೀದಿಸಲು ಕಾಯುತ್ತಿರುವವರಿಗೆ ಕೊಂಚ ನೆಮ್ಮದಿ ನೀಡಿದೆ. ಸೆಪ್ಟೆಂಬರ್ ಆರಂಭದಿಂದ ಚಿನ್ನದ ದರದಲ್ಲಿ ಇಳಿಕೆಯ ಪ್ರವೃತ್ತಿ ಕಂಡುಬರುತ್ತಿದ್ದು, ಬುಧವಾರವೂ ಬೆಲೆಯಲ್ಲಿ ಕುಸಿತ ದಾಖಲಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 207 ರೂ. ಇಳಿಕೆಯಾಗಿ 15,202 ರೂ.ಗೆ ತಲುಪಿದೆ. ಇದರಂತೆ 10 ಗ್ರಾಂ ಚಿನ್ನದ ಬೆಲೆ 1,52,020 ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 190 ರೂ. ಇಳಿಕೆಯಾಗಿ 13,935 ರೂ.ಗೆ ತಲುಪಿದ್ದು, 10 ಗ್ರಾಂಗೆ 1,39,350 ರೂ. ದರವಾಗಿದೆ.
ಇನ್ನು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಂಗೆ 155 ರೂ. ಕಡಿಮೆಯಾಗಿ 11,402 ರೂ.ಗೆ ತಲುಪಿದೆ. ಮಂಗಳೂರಿನಲ್ಲೂ ಇದೇ ದರ ದಾಖಲಾಗಿದ್ದು, ಚಿನ್ನದ ಬೆಲೆಯಲ್ಲಿ ಸತತ ಕುಸಿತದ ವಾತಾವರಣ ಮುಂದುವರಿದಿದೆ.
ಚಿನ್ನದ ಜೊತೆಗೆ ಬೆಳ್ಳಿಯ ದರವೂ ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೂರು ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಬಲಿಷ್ಠ ಡಾಲರ್, ಹೆಚ್ಚುತ್ತಿರುವ ಹಣದುಬ್ಬರದ ಆತಂಕ ಹಾಗೂ ಅಮೆರಿಕದಲ್ಲಿ ಬಡ್ಡಿದರ ಏರಿಕೆಯ ನಿರೀಕ್ಷೆಗಳು ಚಿನ್ನದ ಬೆಲೆಯ ಮೇಲೆ ಒತ್ತಡ ತಂದಿವೆ.



