
ನವದೆಹಲಿ, ಆಗಸ್ಟ್ 21: ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತಕ್ಕೆ ತಕ್ಷಣದ ಭದ್ರತಾ ಸವಾಲಾಗಿದ್ದರೂ, ದೀರ್ಘಾವಧಿಯಲ್ಲಿ ಚೀನಾವೇ ಭಾರತದ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ ಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಹೇಳಿದ್ದಾರೆ.
ತಮ್ಮ ಹೊಸ ಪುಸ್ತಕ ದಿ ಕ್ಯೂರಿಯಸ್ ಅಂಡ್ ದಿ ಕ್ಲಾಸಿಫೈಡ್: ಅನ್ಅರ್ಥಿಂಗ್ ಮಿಲಿಟರಿ ಮಿಥ್ಸ್ ಅಂಡ್ ಮಿಸ್ಟರೀಸ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನರವಾಣೆ, ಚೀನಾವನ್ನು ‘ಶತ್ರು’ ಎನ್ನುವುದಕ್ಕಿಂತ ‘ಪ್ರತಿಸ್ಪರ್ಧಿ’ ಎಂದು ಕರೆಯುವುದು ಸೂಕ್ತ ಎಂದು ಹೇಳಿದ್ದಾರೆ. ರಾಜಕೀಯ, ಆರ್ಥಿಕತೆ, ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಮಿಲಿಟರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಚೀನಾ ಭಾರತದೊಂದಿಗೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಪೈಪೋಟಿ ನಡೆಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳೊಂದಿಗೆ ಗಡಿ ಸಂಘರ್ಷಗಳನ್ನು ಎದುರಿಸಿದೆ. ಆದರೆ ಪಾಕಿಸ್ತಾನದಿಂದ ಎದುರಾಗುತ್ತಿರುವ ಭಯೋತ್ಪಾದನೆಯ ಸವಾಲು ತಕ್ಷಣದದ್ದಾಗಿದ್ದರೆ, ಚೀನಾದ ಪ್ರಾಬಲ್ಯ ಮತ್ತು ಅದರ ವಿವಿಧ ಕ್ಷೇತ್ರಗಳಲ್ಲಿನ ಬೆಳವಣಿಗೆಗಳು ಭಾರತದ ಪಾಲಿಗೆ ದೀರ್ಘಾವಧಿಯ ವ್ಯೂಹಾತ್ಮಕ ಸವಾಲಾಗಿವೆ ಎಂದು ನರವಾಣೆ ಹೇಳಿದ್ದಾರೆ. ಗಡಿ ವಿವಾದಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಬೇಕು; ಯುದ್ಧವನ್ನು ಕೊನೆಯ ಆಯ್ಕೆಯಾಗಿ ಮಾತ್ರ ಪರಿಗಣಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಅದೇ ವೇಳೆ, ಶಾಂತಿ ಮತ್ತು ಮಾತುಕತೆಗಳಿಗೆ ಆದ್ಯತೆ ನೀಡಿದರೂ ಭಾರತೀಯ ಸೇನೆ ಯಾವುದೇ ದುಸ್ಸಾಹಸವನ್ನು ಎದುರಿಸಲು ಸದಾ ಸನ್ನದ್ಧವಾಗಿರಬೇಕು ಎಂದು ನರವಾಣೆ ಹೇಳಿದ್ದಾರೆ. 2020ರ ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ಸೇನೆಯನ್ನು ಮುನ್ನಡೆಸಿದ್ದ ಅವರ ಈ ಹೇಳಿಕೆ, ಭಾರತದ ಭವಿಷ್ಯದ ಭದ್ರತಾ ನೀತಿಯಲ್ಲಿ ಚೀನಾದೊಂದಿಗೆ ಸ್ಪರ್ಧೆ ಮತ್ತು ಸಿದ್ಧತೆ ಎರಡಕ್ಕೂ ಹೆಚ್ಚಿನ ಮಹತ್ವವಿರುವುದನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.



