ಭಾರತ ಯುರೋಪ್ ಟ್ರೇಡ್ ಒಪ್ಪಂದ ಹಾಗೂ ಅರಬ್ ಲೀಗ್ ಟ್ರೇಡ್ ಡೀಲ್ ಮಾಡಿಕೊಳ್ಳುತ್ತಿದ್ದಂತೆ ಅಲರ್ಟ್ ಆಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಢೀರನೆ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಫೋನ್ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಪೋನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬೃಹತ್ ಘೋಷಣೆಯೊಂದನ್ನು ಮಾಡಿದ್ದಾರೆ. ಆಪ್ತ ಸ್ನೇಹಿತರಾಗಿದ್ದ ಟ್ರಂಪ್ ಮತ್ತು ಮೋದಿ ನಡುವೆ ಅಮೆರಿಕ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ ಬಳಿಕ ಅಂತರ ಸೃಷ್ಟಿಯಾಗಿತ್ತು.

ನವದೆಹಲಿ, ಫೆಬ್ರವರಿ 2: ತನ್ನ ಆಪ್ತ ಸ್ನೇಹಿತನಾದ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಫೋನ್ನಲ್ಲಿ ಮಾತುಕತೆ ನಡೆಸಿದ ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಸರ್ಪ್ರೈಸ್ ನೀಡಿದ್ದಾರೆ. ಭಾರತ ಯುರೋಪ್ ಮತ್ತು ಅರಬ್ ಲೀಗ್ ಟ್ರೇಡ್ ಲೀಗ್ ಮಾಡಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಡೊನಾಲ್ಡ್ ಟ್ರಂಪ್ ಭಾರತದ ಜೊತೆಗೆ ವ್ಯಾಪಾರ ಒಪ್ಪಂದವನ್ನು (US-India Trade Deal) ಘೋಷಿಸಿದ್ದಾರೆ. ಭಾರತದ ಮೇಲೆ ಹೇರಲಾಗಿದ್ದ ದುಬಾರಿ ಸುಂಕವನ್ನು ಕಡಿಮೆ ಮಾಡಿದ್ದು, ಶೇ. 25ರಷ್ಟಿದ್ದ ಸುಂಕವನ್ನು ಶೇ. 18ಕ್ಕೆ ಇಳಿಸಿದ್ದಾರೆ. ಭಾರತದ ಪಾಲಿಗೆ ಅಮೆರಿಕದ ಈ ನಿರ್ಧಾರ ಬಹಳ ಮಹತ್ವದ್ದಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲಿನ ಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸುವುದಾಗಿ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿದ್ದಾರೆ. ಕಾಲಾನಂತರದಲ್ಲಿ ಈ ಸುಂಕ ದರಗಳು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಈ ವಿಷಯದ ಬಗ್ಗೆ ಟ್ರಂಪ್ ಮತ್ತು ಪ್ರಧಾನಿ ಮೋದಿ ಮಹತ್ವದ ಒಪ್ಪಂದಕ್ಕೆ ಬಂದಿದ್ದು, ಸುಂಕವನ್ನು ಶೇ. 18ರಿಂದ ಶೂನ್ಯಕ್ಕೆ ಇಳಿಸುವುದು ನಮ್ಮ ಗುರಿಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇಂದು ದೂರವಾಣಿ ಸಂಭಾಷಣೆ ವೇಳೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿದರು. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಟ್ರೂತ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, “ಪ್ರಧಾನಿ ಮೋದಿ ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ಹಾಗೇ, ಅವರು ಭಾರತ ದೇಶದ ಪ್ರಭಾವಿ ಮತ್ತು ಗೌರವಾನ್ವಿತ ನಾಯಕ. ವ್ಯಾಪಾರ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ನಾವು ಚರ್ಚಿಸಿದೆವು” ಎಂದು ತಿಳಿಸಿದ್ದಾರೆ.
ಇದರ ಜೊತೆಗೆ, ಇನ್ನೂ ಒಂದು ಮಹತ್ವದ ಸಂಗತಿಯನ್ನು ಟ್ರಂಪ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ. “ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ. ರಷ್ಯಾದ ಬದಲಾಗಿ ಅಮೆರಿಕ ಮತ್ತು ವೆನೆಜುವೆಲಾದಿಂದ ಭಾರತ ಕಚ್ಚಾ ತೈಲವನ್ನು ಖರೀದಿಸಲಿದೆ. ಭಾರತ ಅಮೆರಿಕದಿಂದ ಬಹುತೇಕ ಎಲ್ಲವನ್ನೂ ಖರೀದಿಸಲಿದೆ. ಭವಿಷ್ಯದಲ್ಲಿ ಭಾರತದ ಮೇಲಿನ ಸುಂಕಗಳನ್ನು ಮತ್ತಷ್ಟು ಕಡಿಮೆ ಮಾಡಲಾಗುವುದು. ಕಡಿಮೆಯಾದ ಸುಂಕ ದರಗಳು ತಕ್ಷಣವೇ ಜಾರಿಗೆ ಬರಲಿವೆ” ಎಂದು ಹೇಳಿದ್ದಾರೆ.
ಆದರೆ, ಡೊನಾಲ್ಡ್ ಟ್ರಂಪ್ ನೀಡಿದ ಈ ಹೇಳಿಕೆಗಳ ಕುರಿತು ಭಾರತ ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ.




