
ನವದೆಹಲಿ ,ಜನವರಿ 8 : 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯ ಆಯೋಜನೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಸಲ್ಲಿಸಿದ್ದ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಅಧಿಕೃತವಾಗಿ ತಿರಸ್ಕರಿಸಿದೆ.
ಭಾರತದಲ್ಲಿ ನಡೆಯಲಿರುವ ಪಂದ್ಯಾವಳಿಯ ಸಂದರ್ಭದಲ್ಲಿ ಆಟಗಾರರ ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು, ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ವರ್ಗಾಯಿಸಬೇಕೆಂದು ಐಸಿಸಿಗೆ ಪಟ್ಟು ಹಿಡಿದಿತ್ತು. ಆದರೆ ಭಾರತವು ಪಂದ್ಯಾವಳಿಗಾಗಿ ಅತ್ಯುನ್ನತ ಮಟ್ಟದ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿರುವುದನ್ನು ಖಚಿತಪಡಿಸಿರುವ ಐಸಿಸಿ, ಪಂದ್ಯಗಳ ಸ್ಥಳ ಬದಲಾವಣೆಯ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.
ವಿಶ್ವಕಪ್ನಂತಹ ಬೃಹತ್ ಕ್ರೀಡಾಕೂಟದ ವೇಳಾಪಟ್ಟಿಯಲ್ಲಿ ಕೊನೆಯ ಕ್ಷಣದ ಬದಲಾವಣೆಗಳು ಅಸಾಧ್ಯವೆಂದು ತಿಳಿಸಿರುವ ಐಸಿಸಿ, ಬಾಂಗ್ಲಾದೇಶ ತಂಡವು ನಿಗದಿತ ವೇಳಾಪಟ್ಟಿಯಂತೆ ಭಾರತದಲ್ಲೇ ಪಂದ್ಯಗಳನ್ನು ಆಡಬೇಕೆಂದು ಸ್ಪಷ್ಟವಾಗಿ ಸೂಚಿಸಿದೆ.
ಈ ನಿರ್ಧಾರದೊಂದಿಗೆ ಪಂದ್ಯಾವಳಿಯ ಆತಿಥ್ಯದ ಕುರಿತಾದ ಗೊಂದಲಗಳಿಗೆ ತೆರೆ ಬಿದ್ದಂತಾಗಿದ್ದು, ಎಲ್ಲಾ ತಂಡಗಳು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಬೇಕೆಂದು ಐಸಿಸಿ ಆಶಿಸಿದೆ.



