News

ಪ್ರಧಾನಿ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ: ಮೋದಿ ಜೊತೆ ಏನೆಲ್ಲಾ ಚರ್ಚೆ?

ಪ್ರಧಾನಿ ಮೋದಿ ಅವರನ್ನು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದು, ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಬೆಳೆ ಹಾನಿ, ಕಬ್ಬು ಬೆಳೆಗಾರರ ಸಮಸ್ಯೆ ಸೇರಿ ಮಹದಾಯಿ, ಮೇಕೆದಾಟು ಯೋಜನೆಗಳ ಸಂಬಂಧವೂ ಪ್ರಧಾನಿ ಅವರ ಗಮನ ಸೆಳೆಯಲಾಗಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೂ ಸಿಎಂ ಮನವಿ ಮಾಡಿದ್ದಾರೆ.

ದೆಹಲಿ, ನವೆಂಬರ್​ 17: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರ್ನಾಟಕ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಭೇಟಿ ಮಾಡಿದ್ದು, ರಾಜ್ಯಕ್ಕೆ ಸಂಬಂಧಿಸಿದಂತೆ ಹಲವು ವಿಷಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಬೆಳೆಹಾನಿ, ಕಬ್ಬು ಬೆಳೆಗಾರರ ಸಮಸ್ಯೆ, ಮಹದಾಯಿ ಮತ್ತು ಮೇಕೆದಾಟು ಯೋಜನೆಗಳು ಸೇರಿ ಹಲವು ಪ್ರಮುಖ ವಿಷಯಗಳ ಬಗ್ಗೆ ಪ್ರಧಾನಿಗಳ ಗಮನ ಸೆಳೆದಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರಿಗೆ ಸಚಿವ ಕೃಷ್ಣಭೈರೇಗೌಡ ಸಾಥ್ ನೀಡಿದ್ದಾರೆ.

ಪ್ರಧಾನಿ ಭೇಟಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಒಟ್ಟು 5 ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿರೋದಾಗಿ ತಿಳಿಸಿದ್ದಾರೆ. ​ರಾಜ್ಯದಲ್ಲಿ ಒಟ್ಟು 14,58,000 ಹೆಕ್ಟೇರ್​ ಬೆಳೆ ಹಾನಿಯಾಗಿದ್ದು, ಆ ಕುರಿತು ನಾವು ಜಂಟಿ ಸಮೀಕ್ಷೆ ಮಾಡಿಸಿದ್ದೇವೆ. ರಾಜ್ಯದಲ್ಲಿ ಒಟ್ಟು 3,560 ಕೋಟಿ ನಷ್ಟವಾಗಿದ್ದು, ಮಳೆಯಿಂದಾಗಿ ಮೂಲಸೌಕರ್ಯಗಳಿಗೂ ಹಾನಿಯಾಗಿರುವ ಬಗ್ಗೆ ಪ್ರಧಾನಮಂತ್ರಿಯವರಿಗೆ ಮನವರಿಕೆ ಮಾಡಿದ್ದೇವೆ. ರಾಜ್ಯ ಸರ್ಕಾರವೂ ಬೆಳೆ ಹಾನಿ ಪರಿಹಾರ ಕೊಡುತ್ತಿದ್ದು, ರೈತರಿಗೆ ಕೊಡಬೇಕಾದ ಪರಿಹಾರ 2,800 ಕೋಟಿ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆಯೂ ಪ್ರಧಾನಿ ಮೋದಿಯವರಿಗೆ ಮಾಹಿತಿ ನೀಡಲಾಗಿದೆ.ಎಫ್​ಆರ್​ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಟನ್​​ಗೆ 3,500 ರೂ. ಕೊಡಬೇಕು ಎಂದು ರೈತರ ಬೇಡಿಕೆ ಇದ್ದು, ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ರೈತ ಮುಖಂಡರು, ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ಪ್ರತಿ ಟನ್ ಕಬ್ಬಿಗೆ 3,300 ರೂ. ನಿಗದಿ ಮಾಡಿದ್ದೆವು. ಸರ್ಕಾರದ ದರ ಒಪ್ಪಿಕೊಂಡು ರೈತರು ಪ್ರತಿಭಟನೆ ಹಿಂಪಡೆದರು. ಆದರೆ, ಸಕ್ಕರೆಗೆ ದರ ನಿಗದಿ ಮಾಡುವುದು ಸಹ ಕೇಂದ್ರ ಸರ್ಕಾರ. ಕೆಜಿ ಸಕ್ಕರೆಗೆ 41 ರೂ. ಮಾಡುವಂತೆ ಬೇಡಿಕೆ ಇದ್ದು, ಆ ಬಗ್ಗೆಯೂ ಪ್ರಧಾನಮಂತ್ರಿಗೆ ಮನವಿ ಮಾಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

ಮಹದಾಯಿ ಯೋಜನೆ ವಿಚಾರ ಕೇಂದ್ರ ಸರ್ಕಾರದ ಮುಂದೆ ಇದ್ದು, ಯೋಜನೆ ಜಾರಿಗೆ ಅವರೇ ಅನುಮತಿ ನೀಡಬೇಕು. ಹೀಗಾಗಿ ಆ ಬಗ್ಗೆಯೂ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದೇವೆ. ಕುಡಿಯುವ ನೀರಿನ ಯೋಜನೆ ಕೂಡಲೇ ಮಾಡಿ ಅಂತಾ ಹೇಳಲಾಗಿದೆ. ಅಪ್ಪರ್ ಕೃಷ್ಣ ಟ್ರಿಬ್ಯುನಲ್ 2 ಅಂತಿಮ ವರದಿ ಬಂದು 10 ವರ್ಷ ಆದರೂ ಈವರೆಗೆ ಗೆಜೆಟ್ ನೋಟಿಫಿಕೇಷನ್ ಮಾಡಿಲ್ಲ. ಹೀಗಾಗಿ ಶೀಘ್ರ ಆ ಬಗ್ಗೆ ಕ್ರಮವಹಿಸಲು ಒತ್ತಾಯಿಸಿರೋದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಅರ್ಜಿ ವಜಾ ಆಗಿದ್ದು, ಅನುಮತಿ ಕೊಡಿ ಅಂತಾ CWCಗೆ ಕೇಂದ್ರ ಸರ್ಕಾರ ಹೇಳಬೇಕು. ಕೋರ್ಟ್​​ ಅಡೆತಡೆ ಇಲ್ಲ, ಯೋಜನೆ ಮಾಡಲು ತೊಂದರೆ ಇಲ್ಲ. ಹೀಗಾಗಿ 67 ಟಿಎಂಸಿ ನೀರು ಸಂಗ್ರಹ ಮಾಡ್ತೀವಿ. ತಮಿಳುನಾಡಿಗೆ ಸಹಜವಾಗಿ 177.25 ಟಿಎಂಸಿ ನೀರು ಕೊಡ್ತೀವಿ. ಅದರಲ್ಲೂ ಈ ಬಾರಿ ತಮಿಳುನಾಡಿಗೆ ಅತಿಹೆಚ್ಚು ನೀರು ಹೋಗಿದೆ. ಕುಡಿಯುವ ನೀರು ಯೋಜನೆ ಹಾಗೂ ವಿದ್ಯುತ್ ‌ಉತ್ಪಾದನೆ ತಮಿಳುನಾಡಿಗೂ ಹೆಚ್ಚು ಉಪಯೋಗ ಆಗಲಿದ್ದು, ಕರ್ನಾಟಕದ ಜೊತೆ ಜಗಳ ಆಡೋದು ತಪ್ಪುತ್ತೆ ಎಂದು ಸಿಎಂ ಹೇಳಿದ್ದಾರೆ. ಜೊತೆಗೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಸಂಬಂಧವೂ ಪ್ರಧಾನಿಗೆ ಮನವಿ ಮಾಡಲಾಗಿದೆ ಎಂದಿದ್ದಾರೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft