
ಬೆಂಗಳೂರು, ಸೆಪ್ಟೆಂಬರ್ 8: ಆ್ಯಪಲ್ನ ಬಹುನಿರೀಕ್ಷಿತ ಮೊದಲ ಫೋಲ್ಡೆಬಲ್ ಐಫೋನ್ ಕುರಿತು ಟೆಕ್ ಜಗತ್ತಿನಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 9ರಂದು ನಡೆಯಲಿರುವ ಆ್ಯಪಲ್ನ ವಿಶೇಷ ಕಾರ್ಯಕ್ರಮಕ್ಕೂ ಮುನ್ನ ‘iPhone Fold’ ಎಂದು ಹೇಳಲಾಗುತ್ತಿರುವ ಸಾಧನದ ಅನ್ಬಾಕ್ಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿರುವುದು ಆ್ಯಪಲ್ನ ಅಂತಿಮ ಉತ್ಪನ್ನವಲ್ಲ, ಚೀನಾದಲ್ಲಿ ತಯಾರಿಸಲಾದ ಮಾಕ್ಅಪ್ ಅಥವಾ ಮೂಲಮಾದರಿ ಎನ್ನಲಾಗಿದೆ.
ವೈರಲ್ ವಿಡಿಯೋದಲ್ಲಿ ಫೋನ್ ಪುಸ್ತಕದಂತೆ ಮಧ್ಯಭಾಗದಲ್ಲಿ ಮಡಚಿಕೊಳ್ಳುವ ವಿನ್ಯಾಸ ಹೊಂದಿರುವುದು ಕಂಡುಬಂದಿದೆ. ಮಡಚಿದಾಗ ಸುಮಾರು 5.5 ಇಂಚಿನ ಹೊರಗಿನ ಡಿಸ್ಪ್ಲೇ ಹಾಗೂ ತೆರೆದಾಗ ಸುಮಾರು 7.8 ಇಂಚಿನ ದೊಡ್ಡ ಒಳಗಿನ ಡಿಸ್ಪ್ಲೇ ಇರಬಹುದು ಎಂಬ ಮಾಹಿತಿ ಸೋರಿಕೆಯಾಗಿದೆ. ತೆರೆದ ಸ್ಥಿತಿಯಲ್ಲಿ ಇದು ಟ್ಯಾಬ್ಲೆಟ್ನಂತಹ ದೊಡ್ಡ ಪರದೆಯ ಅನುಭವ ನೀಡುವ ನಿರೀಕ್ಷೆಯಿದೆ.
ಮಾಕ್ಅಪ್ನಲ್ಲಿ ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಮೇಲ್ಭಾಗದಲ್ಲಿ ವಾಲ್ಯೂಮ್ ಬಟನ್ಗಳು ಕಾಣಿಸಿಕೊಂಡಿವೆ. ಒಳಗಿನ ಡಿಸ್ಪ್ಲೇಯ ಮಧ್ಯಭಾಗದಲ್ಲಿ ಮಡಚುವ ಗುರುತು ಕೂಡ ಗೋಚರಿಸುತ್ತಿದ್ದು, ಅಂತಿಮ ಉತ್ಪನ್ನದಲ್ಲಿ ಈ ಕ್ರೀಸ್ ಅನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಆ್ಯಪಲ್ ಕೆಲಸ ಮಾಡುತ್ತಿದೆ ಎಂಬ ವರದಿಗಳಿವೆ.
ಇನ್ನು ಬೆಲೆಯ ವಿಚಾರವೂ ಗ್ರಾಹಕರ ಗಮನ ಸೆಳೆಯುತ್ತಿದೆ. ವಿವಿಧ ವರದಿಗಳ ಪ್ರಕಾರ ಫೋಲ್ಡೆಬಲ್ ಐಫೋನ್ನ ಬೆಲೆ 2,000 ಡಾಲರ್ಗಿಂತ ಹೆಚ್ಚಿರಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ₹1.5 ಲಕ್ಷಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಸೆಪ್ಟೆಂಬರ್ 9ರ ಆ್ಯಪಲ್ ಕಾರ್ಯಕ್ರಮದಲ್ಲಿ ಈ ಸಾಧನದ ಕುರಿತು ಅಧಿಕೃತ ಮಾಹಿತಿ ಹೊರಬರುವ ನಿರೀಕ್ಷೆ ಇದ್ದು, ಸೋರಿಕೆಯಾದ ಮಾಹಿತಿಗಳು ಎಷ್ಟು ನಿಜ ಎಂಬುದು ಅಂದೇ ಸ್ಪಷ್ಟವಾಗಲಿದೆ.



