
ರಿಯಾದ್, ಸೆಪ್ಟೆಂಬರ್ 8: ಸೌದಿ ಅರೇಬಿಯಾದ ವಿವಿಧ ನಾಗರಿಕ ಹಾಗೂ ಆರ್ಥಿಕ ತಾಣಗಳನ್ನು ಗುರಿಯಾಗಿಸಿಕೊಂಡು ಹೌತಿ ಬಂಡುಕೋರರು ನಡೆಸಿದ ಸರಣಿ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 73 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಸೌದಿ ಅರೇಬಿಯಾದ ಹಲವು ಪ್ರದೇಶಗಳಲ್ಲಿ ದಾಳಿಯ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿವೆ.
ಅಭಾ, ಖಮೀಸ್ ಮುಶೈತ್, ಜಝಾನ್ ಮತ್ತು ನಜ್ರಾನ್ ನಗರಗಳಲ್ಲಿನ ಪ್ರಮುಖ ತಾಣಗಳು ದಾಳಿಗೆ ಗುರಿಯಾಗಿವೆ ಎಂದು ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ. ಹೌತಿಗಳು ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಸೌದಿ ಇಂಧನ ಸಂಸ್ಥೆ ಅರಾಮ್ಕೊಗೆ ಸೇರಿದ ಕೆಲವು ತಾಣಗಳು ಹಾಗೂ ಖಮೀಸ್ ಮುಶೈತ್‌ನಲ್ಲಿರುವ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ದಾಳಿಯಿಂದ ಕೆಲವು ಇಂಧನ ಸೌಲಭ್ಯಗಳ ಕಾರ್ಯಾಚರಣೆಗೆ ತಾತ್ಕಾಲಿಕ ಅಡಚಣೆ ಉಂಟಾಗಿದ್ದು, ಜಝಾನ್‌ನಲ್ಲಿರುವ ಪ್ರಮುಖ ತೈಲ ಸಂಸ್ಕರಣಾ ಘಟಕವೂ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ. ಘಟನೆಯ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆಯಲ್ಲೂ ಆತಂಕ ಹೆಚ್ಚಾಗಿದ್ದು, ಕಚ್ಚಾ ತೈಲದ ಬೆಲೆ ಏರಿಕೆ ಕಂಡಿದೆ.
ಈ ದಾಳಿಯನ್ನು ಸೌದಿ ನೇತೃತ್ವದ ಒಕ್ಕೂಟವು ‘ಅಪಾಯಕಾರಿ ಸಂಘರ್ಷದ ಉಲ್ಬಣ’ ಎಂದು ಬಣ್ಣಿಸಿದೆ. ಸೌದಿ ಅರೇಬಿಯಾದ ಸಾರ್ವಭೌಮತ್ವ, ನಾಗರಿಕರು ಮತ್ತು ದೇಶದಲ್ಲಿರುವ ನಿವಾಸಿಗಳ ಸುರಕ್ಷತೆಗೆ ಇದು ನೇರ ಬೆದರಿಕೆಯಾಗಿದೆ ಎಂದು ಒಕ್ಕೂಟದ ವಕ್ತಾರ ಬ್ರಿಗೇಡಿಯರ್ ಜನರಲ್ ಟರ್ಕಿ ಅಲ್-ಮಾಲಿಕಿ ಹೇಳಿದ್ದಾರೆ. ಮುಂದಿನ ದಾಳಿಗಳನ್ನು ತಡೆಯಲು ಹಾಗೂ ಬೆದರಿಕೆಗಳನ್ನು ನಿಷ್ಕ್ರಿಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.



