
ದೊಡ್ಡಬಳ್ಳಾಪುರ, ಆ.31: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ರೈಲ್ವೆ ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿಯಾಗಿ ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಮೃತರನ್ನು ದೊಡ್ಡಬಳ್ಳಾಪುರ ನಗರದ ಪಾಲನಜೋಗಹಳ್ಳಿ ನಿವಾಸಿ ಇರ್ಫಾನಾ (46) ಹಾಗೂ ಅವರ ಮೊಮ್ಮಕ್ಕಳಾದ ರುಕಿಯಾ (13) ಮತ್ತು ರಾಕಿಯಾ (8) ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಹಿಂದೂಪುರದಿಂದ ಇಬ್ಬರು ಮೊಮ್ಮಕ್ಕಳು ಅಜ್ಜಿಯ ಮನೆಗೆ ಬಂದಿದ್ದರು. ಸೋಮವಾರ ಬೆಳಗ್ಗೆ ಅಜ್ಜಿಯೊಂದಿಗೆ ಊರಿಗೆ ಹಿಂದಿರುಗಲು ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು.
ಹಿಂದೂಪುರ ಪ್ಯಾಸೆಂಜರ್ ರೈಲು ಹತ್ತುವ ಉದ್ದೇಶದಿಂದ ಇರ್ಫಾನಾ ಅವರು ಇಬ್ಬರು ಮೊಮ್ಮಕ್ಕಳೊಂದಿಗೆ ರೈಲು ಹಳಿಯನ್ನು ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಢಿಕ್ಕಿ ಹೊಡೆದಿದೆ. ಪರಿಣಾಮ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರೈಲು ನಿಲ್ದಾಣದಲ್ಲಿ ಸ್ಕೈವಾಕ್ ಇಲ್ಲದಿರುವುದರಿಂದ ಹಳಿ ದಾಟುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಘಟನೆ ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಕುರಿತು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದೇ ಕುಟುಂಬದ ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳ ದಾರುಣ ಸಾವು ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.



