
ನವದೆಹಲಿ, ಆಗಸ್ಟ್ 22, 2026: ಭಾರತದಲ್ಲಿ ಕಿಡ್ನಿ ಕಾಯಿಲೆಗಳ ಚಿಕಿತ್ಸೆಗೆ ಸಂಬಂಧಿಸಿದ ಆರೋಗ್ಯ ವ್ಯವಸ್ಥೆಯ ಗಂಭೀರ ಕೊರತೆ ಸಂಸದೀಯ ಸಮಿತಿಯ ವರದಿಯಿಂದ ಬಹಿರಂಗವಾಗಿದೆ. ದೇಶದ ಕನಿಷ್ಠ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯಾವುದೇ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರೂ ನೆಫ್ರಾಲಜಿಸ್ಟ್ (ಮೂತ್ರಪಿಂಡ ರೋಗ ತಜ್ಞ) ಇಲ್ಲ ಎಂಬ ಆತಂಕಕಾರಿ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ತಂತ್ರಜ್ಞರೂ ಲಭ್ಯವಿಲ್ಲ ಎಂದು ತಿಳಿಸಲಾಗಿದೆ.
ಜಿಲ್ಲಾ ಹಾಗೂ ಗ್ರಾಮೀಣ ಮಟ್ಟದಲ್ಲಿ ಕಿಡ್ನಿ ಕಾಯಿಲೆ ಹೊಂದಿರುವವರಿಗೆ ತಜ್ಞ ವೈದ್ಯರ ಸೇವೆ ದೊರೆಯದಿರುವುದು ಚಿಕಿತ್ಸೆಯಲ್ಲಿ ವಿಳಂಬ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಸಮಿತಿ ಎಚ್ಚರಿಸಿದೆ. ಹಲವು ರಾಜ್ಯಗಳಲ್ಲಿ ಅಗತ್ಯ ಹುದ್ದೆಗಳನ್ನೇ ಮಂಜೂರು ಮಾಡದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಮೇಘಾಲಯ, ಗುಜರಾತ್ ಮತ್ತು ಪುದುಚೇರಿಯ ಜಿಲ್ಲಾಸ್ಪತ್ರೆಗಳಲ್ಲಿ ತಲಾ ಒಬ್ಬ ನೆಫ್ರಾಲಜಿಸ್ಟ್ ಮಾತ್ರ ಇದ್ದಾರೆ ಎಂದು ವರದಿ ತಿಳಿಸಿದೆ.
ಡಯಾಲಿಸಿಸ್ ಸೇವೆಯ ವಿಸ್ತರಣೆಯ ಹೊರತಾಗಿಯೂ, ನುರಿತ ಸಿಬ್ಬಂದಿ, ಉಪಕರಣಗಳ ನಿರ್ವಹಣೆ ಹಾಗೂ ಅಗತ್ಯ ವೈದ್ಯಕೀಯ ಸಾಮಗ್ರಿಗಳ ಪೂರೈಕೆಯಲ್ಲಿ ಸಮಸ್ಯೆಗಳಿವೆ ಎಂದು ಸಮಿತಿ ಗಮನಿಸಿದೆ. 2019–20ರಲ್ಲಿ ಸುಮಾರು 25 ಲಕ್ಷ ಉಚಿತ ಹೀಮೋಡಯಾಲಿಸಿಸ್ ಅವಧಿಗಳಿದ್ದರೆ, 2024–25ರಲ್ಲಿ ಈ ಸಂಖ್ಯೆ ಸುಮಾರು 70 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ ಕಿಡ್ನಿ ಕಾಯಿಲೆಯ ಆರಂಭಿಕ ಹಂತದಲ್ಲೇ ಪತ್ತೆಹಚ್ಚುವಿಕೆ ಮತ್ತು ತಡೆಗಟ್ಟುವ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ವರದಿ ಸೂಚಿಸಿದೆ.
ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳು ಕಿಡ್ನಿ ಸಮಸ್ಯೆಗೆ ಪ್ರಮುಖ ಕಾರಣಗಳಾಗಿರುವುದರಿಂದ ಹೆಚ್ಚಿನ ಅಪಾಯದಲ್ಲಿರುವವರನ್ನು ನಿಯಮಿತವಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಬಡತನ ರೇಖೆಗಿಂತ ಕೆಳಗಿನವರಿಗೆ ವರ್ಷಕ್ಕೆ ಎರಡು ಬಾರಿ ಉಚಿತ ಕಿಡ್ನಿ ಕಾರ್ಯನಿರ್ವಹಣೆಯ ಪರೀಕ್ಷೆ ನಡೆಸುವುದು, ತಜ್ಞ ವೈದ್ಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ದೇಶದಲ್ಲಿ ರಾಷ್ಟ್ರೀಯ ಮೂತ್ರಪಿಂಡ ನೋಂದಣಿ ವ್ಯವಸ್ಥೆ ರೂಪಿಸುವ ಅಗತ್ಯವನ್ನೂ ಸಮಿತಿ ಒತ್ತಿಹೇಳಿದೆ.



