News

ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿವಾದ: ಬಿಜೆಪಿ ಮಾಜಿ ನಾಯಕ ಮನೀಶ್ ಕಶ್ಯಪ್ ಅವರ 40 ಲಕ್ಷ ರೂ. ಮೌಲ್ಯದ ಟೊಯೋಟಾ ಹೈಕ್ರಾಸ್ ಕಾರು ಸ್ಥಗಿತ; ನಿತಿನ್ ಗಡ್ಕರಿ ವಿರುದ್ಧ ಆಕ್ರೋಶ!

ಪಾಟ್ನಾ, ಜುಲೈ 3: ದೇಶಾದ್ಯಂತ ಜಾರಿಗೆ ತರಲಾಗಿರುವ ಇ20 (ಶೇ. 20ರಷ್ಟು ಎಥೆನಾಲ್ ಮಿಶ್ರಿತ) ಪೆಟ್ರೋಲ್ ನೀತಿಯು ವಾಹನ ಸವಾರರಲ್ಲಿ ತೀವ್ರ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ಬಿಹಾರದ ಖ್ಯಾತ ಯೂಟ್ಯೂಬರ್ ಹಾಗೂ ಮಾಜಿ ಬಿಜೆಪಿ ಮುಖಂಡ ಮನೀಶ್ ಕಶ್ಯಪ್ ಅವರು ತಮ್ಮ 40 ಲಕ್ಷ ರೂಪಾಯಿ ಮೌಲ್ಯದ ಹೊಸ ಟೊಯೋಟಾ ಇನೋವಾ ಹೈಕ್ರಾಸ್ (Toyota Innova Hycross) ಕಾರು ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದಾಗಿ ಕೇವಲ 12,000 ಕಿಲೋಮೀಟರ್ ಚಲಿಸುವಷ್ಟರಲ್ಲೇ ಇಂಜಿನ್ ಕೈಕೊಟ್ಟು ರಸ್ತೆ ಮಧ್ಯೆ ನಿಂತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

​ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಮನೀಶ್ ಕಶ್ಯಪ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಇಂಧನ ನೀತಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ನಾನು ಅತ್ಯಂತ ಭರವಸೆಯಿಂದ 40 ಲಕ್ಷ ರೂಪಾಯಿ ನೀಡಿ ಈ ಹೈಬ್ರಿಡ್ ಕಾರನ್ನು ಖರೀದಿಸಿದ್ದೆ. ಕೇವಲ 10,000 ಕಿಲೋಮೀಟರ್‌ಗೆ ಅಧಿಕೃತ ಶೋರೂಮ್‌ನಲ್ಲಿ ಸರ್ವಿಸಿಂಗ್ ಕೂಡ ಮಾಡಿಸಲಾಗಿತ್ತು. ಆದರೆ, ಕೇವಲ 2,000 ಕಿಲೋಮೀಟರ್ ಚಲಿಸುವಷ್ಟರಲ್ಲಿ ಇಂಜಿನ್ ಸಂಪೂರ್ಣವಾಗಿ ಹಾಳಾಗಿದೆ. ಈ ದೇಶದ ವಾಹನಗಳನ್ನು ಗಡ್ಕರಿಯವರು ಬರ್ಬಾದ್ ಮಾಡುತ್ತಿದ್ದಾರೆ” ಎಂದು ಅವರು ನೇರ ವಾಗ್ದಾಳಿ ನಡೆಸಿದ್ದಾರೆ.

​ಪೆಟ್ರೋಲ್‌ನಲ್ಲಿ ಮಿತಿಮೀರಿದ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುತ್ತಿರುವುದರಿಂದ ಇಂಜಿನ್‌ನ ಆಯಸ್ಸು ಕ್ಷೀಣಿಸುತ್ತಿದೆ ಹಾಗೂ ಮೈಲೇಜ್ ಗಣನೀಯವಾಗಿ ಕುಸಿದಿದೆ ಎಂದು ಕಶ್ಯಪ್ ದೂರಿದ್ದಾರೆ. ಪ್ರತಿ ಲೀಟರ್‌ಗೆ 17 ರಿಂದ 20 ಕಿಲೋಮೀಟರ್ ಮೈಲೇಜ್ ನೀಡಬೇಕಿದ್ದ ಕಾರು, ಪ್ರಸ್ತುತ ಕೇವಲ 5 ಕಿಲೋಮೀಟರ್ ಮೈಲೇಜ್ ನೀಡುತ್ತಿದೆ. ವಾಹನದ ಇಂಜಿನ್‌ನಲ್ಲಿ ಪೆಟ್ರೋಲ್‌ಗಿಂತ ಎಥೆನಾಲ್ ಅಂಶವೇ ಹೆಚ್ಚಾಗಿ ಕಂಡುಬರುತ್ತಿದ್ದು, ಇಂಜಿನ್ ಬಿಡಿಭಾಗಗಳು ತುಕ್ಕು ಹಿಡಿಯುತ್ತಿವೆ ಎಂದು ಬಾಟಲಿಯಲ್ಲಿ ಪೆಟ್ರೋಲ್ ಹಿಡಿದು ಪ್ರದರ್ಶಿಸುವ ಮೂಲಕ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಈ ಇಂಜಿನ್ ವೈಫಲ್ಯಕ್ಕೆ ಎಥೆನಾಲ್ ಮಿಶ್ರಿತ ಇಂಧನವೇ ಕಾರಣ ಎಂದು ಹೇಳುತ್ತಿರುವ ಟೊಯೋಟಾ ಕಂಪನಿಯು, ಕಾರಿಗೆ ವಾರಂಟಿ (Warranty) ನೀಡಲು ನಿರಾಕರಿಸುತ್ತಿದೆ ಎಂದು ಮನೀಶ್ ಕಶ್ಯಪ್ ಅಳಲು ತೋಡಿಕೊಂಡಿದ್ದಾರೆ. “ಕಂಪನಿಯು ವಾರಂಟಿ ಇಲ್ಲ ಎನ್ನುತ್ತಿದೆ. 40 ಲಕ್ಷ ರೂಪಾಯಿ ಹಾಕಿ ಕೊಂಡ ಕಾರು ಈಗ ಕಸದಂತಾಗಿದೆ. ಈಗ ನಾವೇನು ಮಾಡಬೇಕು? ಯಾರ ಬಳಿಗೆ ಹೋಗಿ ನ್ಯಾಯ ಕೇಳಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ. ಎಥೆನಾಲ್ ಲಾಬಿಯಿಂದಾಗಿ ಸಾಮಾನ್ಯ ಮತ್ತು ಮಧ್ಯಮ ವರ್ಗದ ಗ್ರಾಹಕರು ನಷ್ಟ ಅನುಭವಿಸುವಂತಾಗಿದ್ದು, ವಾಹನ ಮಾಲೀಕರಿಗೆ ಆಗುತ್ತಿರುವ ಕೋಟ್ಯಂತರ ರೂಪಾಯಿ ನಷ್ಟವನ್ನು ಯಾರು ಭರಿಸುತ್ತಾರೆ ಎಂದು ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft