
ಜೂನ್ 4: ಭಾರತದಲ್ಲಿ ಶಿಕ್ಷಣ ಕ್ಷೇತ್ರವು ಡಿಜೀಕರಣಗೊಳ್ಳುತ್ತಿರುವ ಬೆನ್ನಲ್ಲೇ ವಿದ್ಯಾರ್ಥಿಗಳ ಅತ್ಯಂತ ಸೂಕ್ಷ್ಮ ಹಾಗೂ ವೈಯಕ್ತಿಕ ಮಾಹಿತಿಗಳು ಮುಕ್ತ ಮಾರುಕಟ್ಟೆಯಲ್ಲಿ ಅತ್ಯಲ್ಪ ದರಕ್ಕೆ ಮಾರಾಟವಾಗುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇತ್ತೀಚೆಗೆ CBSE ಯ OSM ಪೋರ್ಟಲ್ ಮತ್ತು NTA ಮರುಪರೀಕ್ಷಾ ಪೋರ್ಟಲ್ಗಳಲ್ಲಿನ ತಾಂತ್ರಿಕ ದೋಷಗಳು ಹಾಗೂ ಸುರಕ್ಷತಾ ಲೋಪಗಳ ಕುರಿತು ವಿದ್ಯಾರ್ಥಿಗಳು ಮತ್ತು ಮೌಲ್ಯಮಾಪಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಶೈಕ್ಷಣಿಕ ವೇದಿಕೆಗಳು ವಿದ್ಯಾರ್ಥಿಗಳ ದತ್ತಾಂಶವನ್ನು (ಡೇಟಾ) ಎಷ್ಟು ಮಟ್ಟಿಗೆ ಸುರಕ್ಷಿತವಾಗಿಡುತ್ತಿವೆ ಎಂಬ ಗಂಭೀರ ಪ್ರಶ್ನೆಗಳು ದೇಶಾದ್ಯಂತ ಮೂಡಿಬಂದಿವೆ.
’ಕೆರಿಯರ್ಸ್360′ ಸಂಸ್ಥೆಯ ಸಂಸ್ಥಾಪಕ ಮಹೇಶ್ವರ್ ಪೇರಿ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಭಾರತದ ಕೋಟ್ಯಂತರ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿ ಕೇವಲ 1,500 ರೂಪಾಯಿಗಳ ಅತ್ಯಲ್ಪ ದರಕ್ಕೆ ಬಹಿರಂಗವಾಗಿ ಮಾರಾಟವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಡೇಟಾಬೇಸ್ಗಳನ್ನು ವಿದ್ಯಾರ್ಥಿಗಳ ತರಗತಿ, ನಗರ, ರಾಜ್ಯ, ಶೈಕ್ಷಣಿಕ ಮಂಡಳಿ ಅಥವಾ ಪರೀಕ್ಷಾ ವಿಭಾಗಗಳ ಆಧಾರದ ಮೇಲೆ ಫಿಲ್ಟರ್ ಮಾಡಿ ಅತ್ಯಂತ ವ್ಯವಸ್ಥಿತವಾಗಿ ಮಾರಲಾಗುತ್ತಿದೆ. ದೇಶದಲ್ಲಿ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣೆ (DPDP) ಕಾಯ್ದೆ, MeitY ಮತ್ತು NICSI ನಂತಹ ಕಟ್ಟುನಿಟ್ಟಿನ ಸುರಕ್ಷತಾ ಸಂಸ್ಥೆಗಳು ಜಾರಿಯಲ್ಲಿದ್ದರೂ, ಈ ದಂಧೆ ಅವ್ಯಾಹತವಾಗಿ ನಡೆಯುತ್ತಿರುವುದು ಇಡೀ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಇಲಾಖೆಯೊಳಗಿನ ಅಧಿಕಾರಿಗಳ ಒಳಸಂಚು ಅಥವಾ ಶಾಮೀಲಾತಿ ಇಲ್ಲದೆ ಇಂತಹ ಸೂಕ್ಷ್ಮ ಮತ್ತು ಖಾಸಗಿ ಡೇಟಾವನ್ನು ಹೊರಗಿನವರು ಪ್ರವೇಶಿಸಲು ಸಾಧ್ಯವೇ ಇಲ್ಲ ಎಂದು ತಜ್ಞರು ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ಪರೀಕ್ಷಾ ಅರ್ಜಿ, ನೋಂದಣಿ ಪೋರ್ಟಲ್ ಮತ್ತು ಪ್ರವೇಶಾತಿ ವೇದಿಕೆಗಳು ವಿದ್ಯಾರ್ಥಿಗಳ ಹೆಸರು, ಫೋನ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಶೈಕ್ಷಣಿಕ ದಾಖಲೆಗಳ ಮತ್ತೊಂದು ಹೊಸ ಭಂಡಾರವನ್ನೇ ಸೃಷ್ಟಿಸುತ್ತವೆ. ಆನ್ಲೈನ್ ಶಿಕ್ಷಣ ವ್ಯವಸ್ಥೆಯಲ್ಲಿ ಸೃಷ್ಟಿಯಾಗುತ್ತಿರುವ ಈ ಭಾರಿ ಪ್ರಮಾಣದ ವಿದ್ಯಾರ್ಥಿಗಳ ಡೇಟಾಬೇಸ್, ಸೈಬರ್ ಅಪರಾಧಿಗಳಿಗೆ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಸುಲಭದ ತುತ್ತಾಗಿ ಪರಿಣಮಿಸಿದೆ.
ಭಾರತದಾದ್ಯಂತ ಶಾಲೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 26 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದು, ಪ್ರತಿ ವರ್ಷ ಕೋಟ್ಯಂತರ ವಿದ್ಯಾರ್ಥಿಗಳು CBSE, JEE, NEET ಮತ್ತು CUET ನಂತಹ ಪ್ರಮುಖ ಪರೀಕ್ಷೆಗಳನ್ನು ಬರೆಯುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಕೋಚಿಂಗ್ ಸೆಂಟರ್ಗಳು, ಕಾಲೇಜುಗಳು ಮತ್ತು ದಲ್ಲಾಳಿಗಳು ವಿದ್ಯಾರ್ಥಿಗಳ ಮಾಹಿತಿಯನ್ನು ಕದ್ದು ತಮ್ಮ ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಡೇಟಾ ವಂಚನೆಯು ಕೇವಲ ತಾಂತ್ರಿಕ ದೋಷವಲ್ಲ, ಬದಲಿಗೆ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ದೇಶದ ಭದ್ರತೆಗೆ ಎದುರಾಗಿರುವ ದೊಡ್ಡ ಕರಾಳ ಮುಖವಾಗಿದ್ದು, ಸರ್ಕಾರ ತಕ್ಷಣವೇ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.



