
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ (ಆರತಿಬೈಲ್) ಘಟ್ಟದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಧಾರವಾಡದ ಮಾಳಾಪುರ ನಿವಾಸಿ ಸಚಿನ್ ಹೆಬ್ಬಳ್ಳಿ (26) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಏಳಾಗಿದೆ.
ಧಾರವಾಡ ಹಾಗೂ ಹುಬ್ಬಳ್ಳಿ ಮೂಲದ ಒಂಬತ್ತು ಮಂದಿ ಸ್ನೇಹಿತರು ಕ್ರೂಸರ್ ವಾಹನದಲ್ಲಿ ಗೋಕರ್ಣ ಹಾಗೂ ಮುರುಡೇಶ್ವರ ಪ್ರವಾಸ ಮುಗಿಸಿ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ತೆರಳುತ್ತಿದ್ದ ವೇಳೆ, ಯಲ್ಲಾಪುರ ಅರಬೈಲ್ ಘಟ್ಟದಲ್ಲಿ ಎದುರಿನಿಂದ ಬಂದ ಲಾರಿಯೊಂದು ಕ್ರೂಸರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿನ್ ಹೆಬ್ಬಳ್ಳಿ ಕೂಡ ಮೃತಪಟ್ಟಿದ್ದಾರೆ.
ಮೃತರನ್ನು ಬಸವರಾಜ್ (48), ಅಭಿಷೇಕ್ ಈಶ್ವರ್ (28), ಅಕ್ಷಯ್ (26), ಅಭಿಷೇಕ್ (26), ಚಾಲಕ ಸಂಜೀವ ಅಂಗಡಿ (33), ಮಂಜುನಾಥ್ ಹಾಗೂ ಸಚಿನ್ ಹೆಬ್ಬಳ್ಳಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಶಿವರಾಜ್ ಹಾಗೂ ಮತ್ತೋರ್ವ ಯುವಕ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಅಪಘಾತದ ಕುರಿತು ತನಿಖೆ ಮುಂದುವರಿಸಿದ್ದಾರೆ.



