
ವಿಜಯಪುರ, ಆ.26: ವಿಜಯಪುರ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ ತಾಯಿ ಹಾಗೂ ಐವರು ಮಕ್ಕಳ ಮೃತದೇಹಗಳು ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ಇಂದು ಬೆಳಗ್ಗೆ ನಡೆದಿದೆ. ಕೆರೆಯಲ್ಲಿ ಆರು ಮೃತದೇಹಗಳು ಪತ್ತೆಯಾಗಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮೃತರನ್ನು ವಿಜಯಪುರ ತಾಲೂಕಿನ ತೊರವಿ ಗ್ರಾಮದ ಮಲಕಾರಿ ಭೀಮರಾಯ ಜಾಲಗೇರಿ ಅವರ ಪತ್ನಿ ಶೋಭಾ ಜಾಲಗೇರಿ (45) ಹಾಗೂ ಅವರ ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್ (10), ಸಾನಿಕಾ (7) ಮತ್ತು ವಿಕಾಸ (5) ಎಂದು ಗುರುತಿಸಲಾಗಿದೆ. ಇವರು ಆ.24ರಂದು ಮನೆಯಿಂದ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.
322 ಎಕರೆ ವಿಸ್ತೀರ್ಣದ ಭೂತನಾಳ ಕೆರೆಯಲ್ಲಿ ಮುಂಜಾನೆ ವಾಕಿಂಗ್ಗೆ ತೆರಳಿದ್ದ ಸ್ಥಳೀಯರು ಮೃತದೇಹಗಳು ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ. ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಠಾಣೆಯ ಪಿಎಸ್ಐ ಸೀತಾರಾಮ ಲಮಾಣಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಕುಟುಂಬದಲ್ಲಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಘಟನೆಯ ನಿಖರ ಕಾರಣ ತಿಳಿದುಬರಲಿದೆ.



