News

ಮಂಗಳೂರು : ದಸರಾ ರಜೆಯಲ್ಲೂ ಪರೀಕ್ಷೆ ನಡೆಸಲು ಮುಂದಾದ ಕಾಲೇಜು ಆಡಳಿತ ; ವಿದ್ಯಾರ್ಥಿಗಳಿಂದ ಪ್ರತಿಭಟನೆ! ತೀವ್ರ ಆಕ್ರೋಶ, ವಾಗ್ವಾದಗಳ ಬಳಿಕ ಪರೀಕ್ಷೆ ಮುಂದೂಡಿಕೆ?

ಮಂಗಳೂರು, 12-10-2026 : ದಸರಾ ಹಬ್ಬದ ಸಂಭ್ರಮದ ನಡುವೆಯೇ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಮುಂದಾದ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವ ಹಾಗೂ ಬೆಂಬಲದೊಂದಿಗೆ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು, ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿದರು. ಅಕ್ಟೋಬರ್ 12ರಿಂದ 28ರವರೆಗೆ ಪರೀಕ್ಷೆಗಳನ್ನು ನಿಗದಿಪಡಿಸಿರುವುದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದರು.

ದಸರಾ ಹಬ್ಬ ಹಾಗೂ ಮಂಗಳೂರು ದಸರಾದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂಬುದು ಪ್ರತಿಭಟನಾನಿರತ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದೆ. ಇತರ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷೆಗಳನ್ನು ಮುಂದೂಡಿರುವಾಗ ಸೈಂಟ್ ಆಗ್ನೆಸ್ ಕಾಲೇಜಿನಲ್ಲೂ ಪರೀಕ್ಷೆಗಳ ವೇಳಾಪಟ್ಟಿಯನ್ನು ಮರುಪರಿಶೀಲಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ಕುರಿತು ಕಾಲೇಜು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.

ಪ್ರತಿಭಟನೆ ತೀವ್ರಗೊಂಡ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಮುಂದಾದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಪೊಲೀಸ್ ವಾಹನಕ್ಕೆ ಅಡ್ಡಲಾಗಿ ನಿಂತು ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ-ನೂಕಾಟವೂ ಸಂಭವಿಸಿತು. ವಶಕ್ಕೆ ಪಡೆದ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು ಎಂಬ ಬೇಡಿಕೆಯೊಂದಿಗೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ, ಪರೀಕ್ಷೆಗಳನ್ನು ಮುಂದೂಡುವ ಕುರಿತು ಕಾಲೇಜು ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ. ಕಾಲೇಜಿನ ಪರೀಕ್ಷಾ ಅಧಿಕಾರಿಯ ಪ್ರಕಾರ, ಪರೀಕ್ಷೆಗಳ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಪ್ರಕಟಿಸಲಾಗಿತ್ತು. ಆದರೂ ದಸರಾ ಹಬ್ಬದ ಪ್ರಮುಖ ದಿನಗಳಲ್ಲಿ ಪರೀಕ್ಷೆ ನಡೆಸಬಾರದು ಎಂಬ ವಿದ್ಯಾರ್ಥಿಗಳ ಮನವಿಯನ್ನು ಪರಿಗಣಿಸಿ, ಅಕ್ಟೋಬರ್ 19 ಮತ್ತು 22ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ. ಈ ಬೆಳವಣಿಗೆ ದಸರಾ ರಜೆ ಹಾಗೂ ಪರೀಕ್ಷಾ ವೇಳಾಪಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಕಾಲೇಜು ಆಡಳಿತದ ನಡುವೆ ಉಂಟಾಗಿದ್ದ ವಿವಾದಕ್ಕೆ ಮಹತ್ವದ ತಿರುವು ನೀಡಿದೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft