
ಸಿಲ್ಚಾರ್, 02-10-2026 : ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ಬೆಂಗಾವಲು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್‌ನ್ನು ರಸ್ತೆ ಮಧ್ಯೆ ತಡೆದ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಬೆನ್ನಲ್ಲೇ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ವಿಐಪಿ ಸಂಸ್ಕೃತಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸಿಲ್ಚಾರ್‌ನಲ್ಲಿ ನಡೆದ ಈ ಘಟನೆಯಲ್ಲಿ ಆಂಬುಲೆನ್ಸ್ ಸುಮಾರು ನಾಲ್ಕು ನಿಮಿಷಗಳ ಕಾಲ ತಡೆಗಟ್ಟಲ್ಪಟ್ಟಿತ್ತು ಎಂದು ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಬಿಜೆಪಿ ನಾಯಕ ಆದಮೇಲೆ ಬುದ್ಧಿ, ಮಾನವೀಯತೆ ಇಲ್ಲದಾಗುವುದು ಸಾಮಾನ್ಯ” ಎಂಬಂತಹ ಕಟುವಾದ ಟೀಕೆಗಳು ಹಾಗೂ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ. ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಿಂತ ರಾಜಕೀಯ ನಾಯಕರ ವಾಹನ ಸಂಚಾರಕ್ಕೆ ಆದ್ಯತೆ ನೀಡುವ ವ್ಯವಸ್ಥೆಯ ವಿರುದ್ಧ ಜನರು ಪ್ರಶ್ನೆ ಎತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ವಿಷಾದ ವ್ಯಕ್ತಪಡಿಸಿ, ರೋಗಿ ಮತ್ತು ಅವರ ಕುಟುಂಬದವರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಆಂಬುಲೆನ್ಸ್ ಸಂಚಾರಕ್ಕೆ ಅಡ್ಡಿಯಾಗಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ಅವರು, ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದರು. ಕರ್ತವ್ಯ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇದೇ ವೇಳೆ ಆಂಬುಲೆನ್ಸ್ ಸೇರಿದಂತೆ ಯಾವುದೇ ತುರ್ತು ಸೇವೆಗಳ ವಾಹನಗಳಿಗೆ ವಿಐಪಿ ವಾಹನಗಳ ಸಂಚಾರದ ಕಾರಣದಿಂದ ಅಡ್ಡಿಯಾಗಬಾರದು ಎಂದು ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ನಡುವೆ ಆಂಬುಲೆನ್ಸ್‌ನಲ್ಲಿ ಸಾಗಿಸಲಾಗುತ್ತಿದ್ದ ರೋಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಘಟನೆಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ರೋಗಿಯ ಸಾವು ಮತ್ತು ಆಂಬುಲೆನ್ಸ್ ತಡೆದ ಘಟನೆಯ ನಡುವೆ ನೇರ ಸಂಬಂಧವಿದೆ ಎಂಬುದು ದೃಢಪಟ್ಟಿಲ್ಲ ಎಂದು ವರದಿಗಳು ತಿಳಿಸಿವೆ. ಅಧಿಕಾರ, ಹುದ್ದೆ ಮತ್ತು ಭದ್ರತೆಯ ಹೆಸರಿನಲ್ಲಿ ಸಾಮಾನ್ಯ ಜನರ ತುರ್ತು ಅಗತ್ಯಗಳನ್ನು ಕಡೆಗಣಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಜನಪ್ರತಿನಿಧಿಗಳ ಸಂಚಾರಕ್ಕಿಂತ ಜನರ ಜೀವ ಮತ್ತು ತುರ್ತು ವೈದ್ಯಕೀಯ ಸೇವೆಗಳಿಗೆ ಮೊದಲ ಆದ್ಯತೆ ಇರಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗಿದೆ.



