
ಬೆಂಗಳೂರು, ಜುಲೈ 10: ಬೆಂಗಳೂರಿನಲ್ಲಿ ಸಂಚರಿಸುವ ಎಲೆಕ್ಟ್ರಿಕ್ ಆಟೋಗಳಿಗೆ ಇನ್ನು ಮುಂದೆ ಪರ್ಮಿಟ್ ಕಡ್ಡಾಯಗೊಳಿಸಲು ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಪರ್ಮಿಟ್ ಇಲ್ಲದೆ ಸಂಚರಿಸುವ ಎಲೆಕ್ಟ್ರಿಕ್ ಆಟೋಗಳು ಅಪಘಾತಕ್ಕೀಡಾದರೆ ಪ್ರಯಾಣಿಕರಿಗೆ ವಿಮೆ ಪರಿಹಾರ ದೊರೆಯದಿರುವುದು ಹಾಗೂ ಅಕ್ರಮ ಸಂಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಜಾರಿಗೊಳಿಸಲಾಗುತ್ತಿದೆ.
ಇದುವರೆಗೆ ಹಲವು ಎಲೆಕ್ಟ್ರಿಕ್ ಆಟೋಗಳು ಪರ್ಮಿಟ್ ಇಲ್ಲದೇ ಸಂಚರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಇದರಿಂದ ಕಾನೂನು ಮತ್ತು ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಎಲೆಕ್ಟ್ರಿಕ್ ಆಟೋಗಳು ಕಡ್ಡಾಯವಾಗಿ ಪರ್ಮಿಟ್ ಪಡೆದು ಮಾತ್ರ ಸಂಚರಿಸಬೇಕು ಎಂದು ಸಾರಿಗೆ ಇಲಾಖೆ ಸೂಚಿಸಿದೆ.
ಆಟೋ ಚಾಲಕರಿಗೆ ಯಾವುದೇ ಆರ್ಥಿಕ ಹೊರೆ ಆಗದಂತೆ ಉಚಿತವಾಗಿಯೇ ಪರ್ಮಿಟ್ ನೀಡಲು ಇಲಾಖೆ ಮುಂದಾಗಿದೆ. ಶೀಘ್ರದಲ್ಲೇ ಪರ್ಮಿಟ್ ವಿತರಣೆಯ ಕುರಿತು ಅಗತ್ಯ ಮಾರ್ಗಸೂಚಿ ಹಾಗೂ ನೋಂದಣಿ ಪ್ರಕ್ರಿಯೆಯನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕ್ರಮದಿಂದ ಎಲೆಕ್ಟ್ರಿಕ್ ಆಟೋ ಸೇವೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಪ್ರಯಾಣಿಕರ ಹಿತಾಸಕ್ತಿ ಹಾಗೂ ಸುರಕ್ಷತೆಗೆ ಮತ್ತಷ್ಟು ಬಲ ಸಿಗಲಿದೆ ಎಂದು ಸಾರಿಗೆ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.



