
ಜಪಾನ್, ಸೆಪ್ಟೆಂಬರ್ 18 :
ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ಗೆ ತೆರಳಿರುವ ಭಾರತೀಯ ಕ್ರೀಡಾಪಟುಗಳಿಗೆ ಎದುರಾಗಿರುವ ವಸತಿ ಮತ್ತು ವ್ಯವಸ್ಥಾಪನಾ ಗೊಂದಲ ಇದೀಗ ಕ್ರೀಡಾ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಭಾರತೀಯ ಎಂಎಂಎ ಕ್ರೀಡಾಪಟು ವರುಣ್ ಸನ್ಯಾಲ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಅಧಿಕೃತ ಅಕ್ರಿಡಿಟೇಶನ್ ಕಾರ್ಡ್ ಹೊಂದಿದ್ದರೂ ವ್ಯವಸ್ಥೆಯಲ್ಲಿ ತಮ್ಮ ಹೆಸರು ಪತ್ತೆಯಾಗದೆ ಗಂಟೆಗಳ ಕಾಲ ಪರದಾಡಬೇಕಾಯಿತು ಎಂದು ಆರೋಪಿಸಿದ್ದಾರೆ. ಬಳಿಕ ಅವರಿಗೆ ನೀಡಲಾದ ಕೊಠಡಿಗೆ ಮತ್ತಿಬ್ಬರು ಭಾರತೀಯ ಕ್ರೀಡಾಪಟುಗಳನ್ನೂ ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಸನ್ಯಾಲ್ ಅವರ ಪ್ರಕಾರ, ನಾಗೋಯಾಗೆ ತಲುಪಿದ ಬಳಿಕ ಹಲವು ಗಂಟೆಗಳ ಕಾಲ ಕೊಠಡಿ ಹಂಚಿಕೆ ಹಾಗೂ ಪ್ರವೇಶ ಪ್ರಕ್ರಿಯೆಗಾಗಿ ಕಾಯಬೇಕಾಯಿತು. ಈ ಅವಧಿಯಲ್ಲಿ ಸೂಕ್ತ ಆಹಾರವೂ ದೊರೆಯದೆ ಕೇವಲ ನೀರು ಮತ್ತು ಕೆಲವು ತಿಂಡಿಗಳನ್ನೇ ಅವಲಂಬಿಸಬೇಕಾಯಿತು ಎಂದು ಅವರು ಹೇಳಿದ್ದಾರೆ. ನಂತರ ನೀಡಲಾದ ಕೊಠಡಿಯಲ್ಲಿ ಈಗಾಗಲೇ ಇಬ್ಬರು ಭಾರತೀಯ ಕ್ರೀಡಾಪಟುಗಳನ್ನು ನಿಯೋಜಿಸಲಾಗಿತ್ತು ಎಂಬುದು ತಿಳಿದುಬಂದಿದ್ದು, ಒಂದೇ ಕೊಠಡಿಯಲ್ಲಿ ಮೂವರು ಉಳಿಯುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಆಯೋಜಕರ ಅವ್ಯವಸ್ಥೆಯ ಪ್ರಶ್ನೆಯಾಗಿ ಉಳಿಯದೆ, ಭಾರತೀಯ ಕ್ರೀಡಾಪಟುಗಳ ಕಲ್ಯಾಣ ಮತ್ತು ಅವರನ್ನು ಕಳುಹಿಸುವ ಮೊದಲು ಮಾಡಬೇಕಾದ ಸಿದ್ಧತೆಗಳ ಬಗ್ಗೆಯೂ ಪ್ರಶ್ನೆಗಳನ್ನು ಎಬ್ಬಿಸಿದೆ. ಏಷ್ಯನ್ ಗೇಮ್ಸ್‌ನಂತಹ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ದೇಶವನ್ನು ಪ್ರತಿನಿಧಿಸಲು ತೆರಳುವ ಕ್ರೀಡಾಪಟುಗಳಿಗೆ ಕನಿಷ್ಠ ವಸತಿ, ಆಹಾರ, ಸಾರಿಗೆ ಹಾಗೂ ಅಕ್ರಿಡಿಟೇಶನ್ ವ್ಯವಸ್ಥೆಗಳು ಸುಗಮವಾಗಿರುವಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ಭಾರತೀಯ ಕ್ರೀಡಾ ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಕೇಂದ್ರ ಸರ್ಕಾರ ಮತ್ತು ಕ್ರೀಡಾ ಸಚಿವಾಲಯವು ಇಂತಹ ಸಮಸ್ಯೆಗಳು ಎದುರಾಗದಂತೆ ಮುಂಚಿತವಾಗಿ ಸಮನ್ವಯ ಸಾಧಿಸಬೇಕಿತ್ತು ಎಂಬ ಪ್ರಶ್ನೆಯೂ ಈಗ ಎದುರಾಗಿದೆ.
ಈ ನಡುವೆ ಭಾರತೀಯ ತಂಡದ ಚೆಫ್ ಡಿ ಮಿಷನ್ ಸಹ ವಸತಿ ಕೊರತೆ ಎದುರಾಗಿದ್ದನ್ನು ಒಪ್ಪಿಕೊಂಡಿದ್ದು, ಹೆಚ್ಚುವರಿ ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಪದಕಕ್ಕಾಗಿ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಸ್ಪರ್ಧೆಗೆ ಮುನ್ನವೇ ವಸತಿ ಮತ್ತು ಮೂಲಭೂತ ಸೌಲಭ್ಯಗಳಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕ್ರೀಡಾಪಟುಗಳ ಪರಿಶ್ರಮಕ್ಕೆ ತಕ್ಕ ಗೌರವ ಮತ್ತು ಸುರಕ್ಷಿತ, ಸಮರ್ಪಕ ಸೌಲಭ್ಯಗಳನ್ನು ಖಚಿತಪಡಿಸುವಲ್ಲಿ ಕೇಂದ್ರದ ಕ್ರೀಡಾ ಆಡಳಿತ ವ್ಯವಸ್ಥೆ ಹೆಚ್ಚಿನ ಹೊಣೆಗಾರಿಕೆ ವಹಿಸಬೇಕೆಂಬ ಆಗ್ರಹ ಇದೀಗ ಕೇಳಿಬರುತ್ತಿದೆ.



