
ಸ್ಥಳ, ದಿನಾಂಕ : ಜಮುಯಿ, ಸೆಪ್ಟೆಂಬರ್ 21 : ಬಿಹಾರದ ಜಮುಯಿ ಜಿಲ್ಲೆಯಲ್ಲಿ ಕೋಚಿಂಗ್ ತರಗತಿ ಮುಗಿಸಿ ಸ್ಕೂಟರ್‌ನಲ್ಲಿ ಹಿಂದಿರುಗುತ್ತಿದ್ದ ನಾಬಾಲಿಗ ಬಾಲಕ ಹಾಗೂ ಬಾಲಕಿಯನ್ನು ಗುಂಪೊಂದು ತಡೆದು ಹಲ್ಲೆ ನಡೆಸಿ, ಬಾಲಕಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಾಹಿತಿಯ ಪ್ರಕಾರ, ಇಬ್ಬರೂ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಸಂಜೆ ಕೋಚಿಂಗ್‌ನಿಂದ ವಾಪಸ್ ಆಗುತ್ತಿದ್ದ ವೇಳೆ ಗುಂಪೊಂದು ಅವರ ಸ್ಕೂಟರ್‌ನ್ನು ತಡೆದಿದೆ. ಬಳಿಕ ಇಬ್ಬರನ್ನೂ ಸುತ್ತುವರಿದು ಪ್ರಶ್ನಿಸಿ, ಬಾಲಕನಿಗೆ ಹೊಡೆದಿದ್ದಾರೆ. ಬಾಲಕಿ ಹಾಗೂ ಬಾಲಕ ಕ್ಷಮೆ ಕೋರಿ ಅಲ್ಲಿಂದ ತೆರಳಲು ಮನವಿ ಮಾಡುತ್ತಿದ್ದರೂ ಗುಂಪಿನ ಕೆಲವರು ಅವರನ್ನು ಬಿಡದೆ ಕಿರುಕುಳ ನೀಡಿದ ಆರೋಪವಿದೆ.
ಘಟನೆಯ ವಿಡಿಯೋದಲ್ಲಿ ಬಾಲಕಿಗೆ ಕೆಲವರು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ಹಾಗೂ ಆಕೆಯನ್ನು ಎತ್ತಿಕೊಂಡು ಹೋಗಲು ಯತ್ನಿಸುತ್ತಿರುವ ದೃಶ್ಯಗಳು ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತ ನಾಬಾಲಿಗರನ್ನು ಸಂಪರ್ಕಿಸಿ ಆರೋಪಿಗಳ ಗುರುತಿನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಸಂಬಂಧ ಏಳು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದು, ಘಟನೆಯ ಸಂಪೂರ್ಣ ತನಿಖೆ ಮುಂದುವರಿದಿದೆ.



