
ಕಾನ್ಪುರ, ಸೆ.9: ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಆಕ್ಷೇಪಿಸಿದ 47 ವರ್ಷದ ವ್ಯಕ್ತಿಯೊಬ್ಬರನ್ನು ಕೆಲ ಯುವಕರು ಹಲ್ಲೆ ನಡೆಸಿ ಕೊಂದಿರುವ ಘಟನೆ ನಡೆದಿದೆ. ಮೃತರನ್ನು ಅಮಿತ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆ ಕಾಕಾದೇವ್ ಪೊಲೀಸ್ ಠಾಣಾ ವ್ಯಾಪ್ತಿಯ ಓಂ ಚೌರಾಹಾ ಬಳಿ ನಡೆದಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೊಲೀಸರ ಪ್ರಕಾರ, ಸೆಪ್ಟೆಂಬರ್ 5ರ ರಾತ್ರಿ ಅಮಿತ್ ಕುಮಾರ್ ಅವರು ತಮ್ಮ ಅಂಗಡಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ, ರಸ್ತೆ ಬದಿಯಲ್ಲಿ ಕೆಲ ಯುವಕರು ಮದ್ಯ ಸೇವಿಸುತ್ತಿರುವುದನ್ನು ಕಂಡಿದ್ದಾರೆ. ಅವರಲ್ಲಿ ಒಬ್ಬರು ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಅಮಿತ್ ಕುಮಾರ್ ಆಕ್ಷೇಪಿಸಿದ್ದಾರೆ. ಇದರಿಂದ ಮಾತಿನ ಚಕಮಕಿ ನಡೆದಿದ್ದು, ಬಳಿಕ ನಾಲ್ವರು ಯುವಕರು ಅವರನ್ನು ಸುತ್ತುವರಿದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಅಮಿತ್ ಕುಮಾರ್ ಅವರ ತಲೆಗೆ ಇಟ್ಟಿಗೆ ಹಾಗೂ ಕಲ್ಲುಗಳಿಂದ ಪದೇಪದೇ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆರಂಭದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದಾರೆಂದು ತಿಳಿದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನಗಳ ಚಿಕಿತ್ಸೆಯ ಬಳಿಕ ಸೆಪ್ಟೆಂಬರ್ 7ರಂದು ಅವರು ಮೃತಪಟ್ಟಿದ್ದಾರೆ. ನಂತರ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಹಲ್ಲೆಯ ಸತ್ಯ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿ ಕಾಕಾದೇವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಗಳು ತನಿಖೆಗೆ ಪ್ರಮುಖ ಸಾಕ್ಷಿಯಾಗಿವೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಸಾಮಾನ್ಯ ವಿಚಾರವೊಂದು ಮಾರಣಾಂತಿಕ ಹಲ್ಲೆಗೆ ತಿರುಗಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.



