News

ಎಸ್ ಐ ಆರ್ ನಲ್ಲಿ ಕಂಡುಬಂದ 3 ಕೋಟಿ ಅನರ್ಹರು ಬಾಂಗ್ಲಾದೇಶದಿಂದ ಬಂದ ನುಸುಳುಕೋರರು : ಅಮಿತ್ ಷಾ!

ಮೂರು ಕೋಟಿ ಬಾಂಗ್ಲಾದೇಶಿಗರು ಭಾರತಕ್ಕೆ ನುಸುಳುವುದೂ ಹೇಗೆ ಸಾಧ್ಯ? ಇಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಎಷ್ಟೊಂದು ಅನರ್ಥ ಹೇಳಿಕೆ? ಅಮಿತ್ ಶಾ ಹೇಳಿಕೆಗೆ ವ್ಯಾಪಕ ಚರ್ಚೆ!

ನವದೆಹಲಿ, 03-11-2026 : ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 13 ಕೋಟಿ ಹೆಸರುಗಳ ಪೈಕಿ ಮೂರು ಕೋಟಿ ಮಂದಿ ಬಾಂಗ್ಲಾದೇಶಿ ಅಕ್ರಮ ವಲಸಿಗರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಇದೀಗ ದೇಶಾದ್ಯಂತ ರಾಜಕೀಯ ಚರ್ಚೆಗೆ ಕಾರಣವಾಗಿದೆ. ದೇಶದ ಅತ್ಯುನ್ನತ ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರಿಂದ ಇಂತಹ ಹೇಳಿಕೆ ಹೊರಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೂರು ಕೋಟಿ ಬಾಂಗ್ಲಾದೇಶಿಗರು ಭಾರತಕ್ಕೆ ನುಸುಳಿದ್ದಾರೆ ಎನ್ನುವುದಾದರೆ, ಇಷ್ಟು ದೊಡ್ಡ ಪ್ರಮಾಣದ ಅಕ್ರಮ ವಲಸೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಯೂ ಸಹಜವಾಗಿ ಎದುರಾಗಿದೆ.

ಸೋಮವಾರ ಹೈದರಾಬಾದ್‌ನಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 13 ಕೋಟಿ ಹೆಸರುಗಳ ಪೈಕಿ 6.2 ಕೋಟಿಗೂ ಅಧಿಕ ಮಂದಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ, ಸುಮಾರು ಮೂರು ಕೋಟಿ ಮಂದಿ ಮೃತಪಟ್ಟಿದ್ದಾರೆ ಹಾಗೂ ಒಂದು ಕೋಟಿಗೂ ಅಧಿಕ ಹೆಸರುಗಳು ನಕಲಿ ಎಂದು ವಿವರಿಸಿದ್ದಾರೆ. ಉಳಿದ ಮೂರು ಕೋಟಿ ಹೆಸರುಗಳು ಅಸ್ತಿತ್ವದಲ್ಲೇ ಇಲ್ಲದವರದ್ದಾಗಿದ್ದು, ಅವು ಬಾಂಗ್ಲಾದೇಶಿ ಅಕ್ರಮ ವಲಸಿಗರಿಗೆ ಸೇರಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಅಕ್ರಮ ವಲಸಿಗರನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ. ನಕಲಿ ಮತಗಳ ಮೂಲಕ ಚುನಾವಣೆ ಗೆಲ್ಲಲು ಕಾಂಗ್ರೆಸ್ ಬಯಸುತ್ತಿದೆ ಎಂದೂ ಟೀಕಿಸಿದ್ದಾರೆ. ಆದರೆ, ಮತದಾರರ ಪಟ್ಟಿಯಲ್ಲಿ ಪತ್ತೆಯಾಗದ ಅಥವಾ ಗೈರುಹಾಜರಾಗಿರುವ ಮೂರು ಕೋಟಿ ಹೆಸರುಗಳೆಲ್ಲವೂ ಬಾಂಗ್ಲಾದೇಶಿ ಪ್ರಜೆಗಳಿಗೆ ಸೇರಿವೆ ಎಂಬುದಕ್ಕೆ ಯಾವ ಆಧಾರವಿದೆ? ಈ ಬಗ್ಗೆ ಅಧಿಕೃತ ದಾಖಲೆಗಳು ಮತ್ತು ನಿಖರ ಅಂಕಿಅಂಶಗಳನ್ನು ಬಹಿರಂಗಪಡಿಸಬೇಕೆಂಬ ಪ್ರಶ್ನೆಗಳು ಮಹತ್ವ ಪಡೆದಿವೆ.

ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ಸರಿಪಡಿಸುವುದು ಮತ್ತು ನಕಲಿ ಹೆಸರುಗಳನ್ನು ತೆಗೆದುಹಾಕುವುದು ಚುನಾವಣಾ ಪ್ರಕ್ರಿಯೆಯ ದೃಷ್ಟಿಯಿಂದ ಅಗತ್ಯವೇ ಆಗಿದೆ. ಆದರೆ, ಪಟ್ಟಿಯಿಂದ ಕೈಬಿಟ್ಟ ಪ್ರತಿಯೊಂದು ಹೆಸರಿನ ಹಿಂದಿನ ಕಾರಣವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಮಾಹಿತಿ ನೀಡುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಕೇವಲ ಗೈರುಹಾಜರಿ ಅಥವಾ ಪತ್ತೆಯಾಗದಿರುವುದನ್ನೇ ವಿದೇಶಿ ಪ್ರಜೆ ಎಂಬುದಕ್ಕೆ ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಮೂರು ಕೋಟಿ ಬಾಂಗ್ಲಾದೇಶಿಗರು ನುಸುಳಿದ್ದಾರೆ ಎಂಬ ಗಂಭೀರ ಹೇಳಿಕೆಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕೆಂಬ ಆಗ್ರಹವೂ ಇದೀಗ ಕೇಳಿಬರುತ್ತಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft