
ಬೆಂಗಳೂರು, ಸೆ. 15 : ರಾಜ್ಯ ಸರ್ಕಾರದ ವತಿಯಿಂದ ಮುಂದಿನ ವರ್ಷದಿಂದ ಅಧಿಕೃತವಾಗಿ ಇಂಜಿನಿಯರ್ಗಳ ದಿನವನ್ನು ಆಚರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಮಂಗಳವಾರ ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಈ ಘೋಷಣೆ ಮಾಡಿದರು.
ಸರ್ಕಾರದ ವತಿಯಿಂದ ಇಂಜಿನಿಯರ್ಗಳ ದಿನ ಆಚರಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದಕ್ಕೆ ತಾವು ಸಮ್ಮತಿ ಸೂಚಿಸಿರುವುದಾಗಿ ಶಿವಕುಮಾರ್ ತಿಳಿಸಿದರು. ಭಾರತದಲ್ಲಿ ಇಂಜಿನಿಯರ್ಗಳ ಸಂಖ್ಯೆ ಹೆಚ್ಚಿನದಾಗಿದ್ದು, ಅವರ ಕೊಡುಗೆಯನ್ನು ಗುರುತಿಸುವುದು ಸರ್ಕಾರದ ಕರ್ತವ್ಯವಾಗಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಇಂಜಿನಿಯರ್ಗಳ ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.
ಇಂಜಿನಿಯರ್ಗಳು ದೇಶದ ಆಸ್ತಿಯಾಗಿದ್ದು, ವಿಜ್ಞಾನಿಗಳ ಸಂಶೋಧನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ದೇಶದ ಹಾಗೂ ರಾಜ್ಯದ ಅಭಿವೃದ್ಧಿಗೆ ಇಂಜಿನಿಯರ್ಗಳು ಅಡಿಪಾಯ ಹಾಕುತ್ತಿದ್ದಾರೆ. ಇಂಧನ, ಕಟ್ಟಡ ನಿರ್ಮಾಣ, ಐಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಸರ್ ಎಂ. ವಿಶ್ವೇಶ್ವರಯ್ಯ ಅವರು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದ್ದು, ಅವರ ಸ್ಮರಣೆಯೊಂದಿಗೆ ಇಂಜಿನಿಯರ್ಗಳ ಸೇವೆ ಮತ್ತು ಸಾಧನೆಯನ್ನು ಗೌರವಿಸುವ ಉದ್ದೇಶದಿಂದ ಸರ್ಕಾರದ ಮಟ್ಟದಲ್ಲಿ ಇಂಜಿನಿಯರ್ಗಳ ದಿನಾಚರಣೆಗೆ ಮುಂದಾಗಲಾಗಿದೆ ಎಂದು ಅವರು ತಿಳಿಸಿದರು.



