News

40 ಪ್ರಯಾಣಿಕರ ಜೀವ ಉಳಿಸಿ ತಾನೇ ಇಹಲೋಕ ತ್ಯಜಿಸಿದ ಚಾಲಕ! ಕೊನೆಯ ಕ್ಷಣದಲ್ಲೂ ಕರ್ತವ್ಯ ಮರೆಯದ ಸಾರಥಿ ಜೆಟ್ಟಿ ಶಿವ ಅವರ ಮಾನವೀಯತೆಗೆ ದೇಶದಾದ್ಯಂತ ಮೆಚ್ಚುಗೆ

ಮಂಗಳೂರು, 10-10-2026 : ತನ್ನ ಪ್ರಾಣವೇ ಸಂಕಷ್ಟದಲ್ಲಿದ್ದರೂ ತನ್ನನ್ನು ನಂಬಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 40 ಮಂದಿಯ ಸುರಕ್ಷತೆಯನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ, ಕೊನೆಯ ಕ್ಷಣದವರೆಗೂ ಸ್ಟೀರಿಂಗ್ ಮೇಲಿನ ನಿಯಂತ್ರಣ ಕಳೆದುಕೊಳ್ಳದೆ ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿ ಪ್ರಾಣ ಬಿಟ್ಟ ಆಂಧ್ರಪ್ರದೇಶದ ಸಾರಿಗೆ ಸಂಸ್ಥೆಯ ಚಾಲಕ ಜೆಟ್ಟಿ ಶಿವ ಅವರ ಕರ್ತವ್ಯನಿಷ್ಠೆ ಹಾಗೂ ಮಾನವೀಯತೆ ಎಲ್ಲರ ಮನಕಲಕಿದೆ. ತನ್ನ ಜೀವ ಉಳಿಸಿಕೊಳ್ಳುವುದಕ್ಕಿಂತ ಪ್ರಯಾಣಿಕರ ಜೀವಕ್ಕೆ ಆದ್ಯತೆ ನೀಡಿದ ಈ ಸಾರಥಿಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಕಾಕಿನಾಡದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (APSRTC) ನಾನ್‌ಸ್ಟಾಪ್ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ಸುಮಾರು 40 ಮಂದಿ ಪ್ರಯಾಣಿಸುತ್ತಿದ್ದರು. ಬಸ್ಸಿನ ಚಾಲಕರಾಗಿದ್ದ ಜೆಟ್ಟಿ ಶಿವ ಅವರಿಗೆ ಪ್ರಯಾಣದ ಮಧ್ಯೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಆದರೂ ಕರ್ತವ್ಯಪ್ರಜ್ಞೆ ಮೆರೆದ ಅವರು, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಸ್ಸನ್ನು ಮುಂದಕ್ಕೆ ಚಲಾಯಿಸಿದರು.

ಬಸ್ಸು ನಕ್ಕಪಲ್ಲಿ ಸಮೀಪ ತಲುಪುತ್ತಿದ್ದಂತೆ ಎದೆನೋವು ತೀವ್ರಗೊಂಡರೂ ಅವರು ಸಮಯಪ್ರಜ್ಞೆ ಕಳೆದುಕೊಳ್ಳದೆ ಬಸ್ಸಿನ ವೇಗವನ್ನು ನಿಯಂತ್ರಿಸಿ, ಯಾವುದೇ ಅಪಾಯ ಸಂಭವಿಸದಂತೆ ರಸ್ತೆಯ ಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಿದರು. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗದಂತೆ ನೋಡಿಕೊಂಡ ಬಳಿಕ ಚಾಲಕರ ಸೀಟಿನಲ್ಲೇ ಕುಸಿದುಬಿದ್ದರು. ತಕ್ಷಣ ಪ್ರಯಾಣಿಕರು ಅವರಿಗೆ ಪ್ರಾಥಮಿಕ ನೆರವು ನೀಡಿ ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

ಚಾಲಕ ಜೆಟ್ಟಿ ಶಿವ ಅವರ ನಿಧನಕ್ಕೆ ಎಪಿಎಸ್‌ಆರ್‌ಟಿಸಿ ಅಧ್ಯಕ್ಷ ಕೊಣಕಳ್ಳ ನಾರಾಯಣರಾವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೊನೆಯ ಕ್ಷಣದಲ್ಲಿಯೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವನ್ನು ತಪ್ಪಿಸಿದ ಅವರ ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವವನ್ನು ಶ್ಲಾಘಿಸಿದ್ದಾರೆ. ಮೃತರ ಕುಟುಂಬಕ್ಕೆ ನಿಯಮಾನುಸಾರ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ತನ್ನ ಜೀವವನ್ನು ಕಳೆದುಕೊಂಡರೂ 40 ಪ್ರಯಾಣಿಕರ ಜೀವಕ್ಕೆ ಯಾವುದೇ ಅಪಾಯವಾಗದಂತೆ ನೋಡಿಕೊಂಡ ಜೆಟ್ಟಿ ಶಿವ ಅವರ ಸೇವೆ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಕರ್ತವ್ಯಪ್ರಜ್ಞೆ ಮತ್ತು ಮಾನವೀಯತೆಗೆ ಮಾದರಿಯಾಗಿ ಉಳಿಯಲಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft