News

ಇ20 ಇಂಧನ ನೀತಿ ಜಾರಿ ಮತ್ತು ಅದರ ವೈಜ್ಞಾನಿಕತೆ ಕುರಿತು ಕಳವಳ: ಸಮಗ್ರ ಮೌಲ್ಯಮಾಪನಕ್ಕೆ ಒತ್ತಾಯ


ಬೆಂಗಳೂರು, 3 ಆಗಸ್ಟ್ 2026: ದೇಶದಲ್ಲಿ ಇ20 (ಶೇಕಡಾ 20 ಎಥೆನಾಲ್ ಹಾಗೂ ಶೇಕಡಾ 80 ಪೆಟ್ರೋಲ್) ಇಂಧನವನ್ನು ಹಂತಹಂತವಾಗಿ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವು ಕಚ್ಚಾ ತೈಲದ ಆಮದು ಅವಲಂಬನೆ ತಗ್ಗಿಸುವುದು ಮತ್ತು ಕೃಷಿ ಕ್ಷೇತ್ರಕ್ಕೆ ಬೆಂಬಲ ನೀಡುವುದು ಎಂಬ ಆಶಯವನ್ನು ಹೊಂದಿದ್ದರೂ, ಅದರ ವೈಜ್ಞಾನಿಕ ಅಳವಡಿಕೆಯ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಕೃಷಿ ಉತ್ಪನ್ನಗಳಿಗೆ ಹಾಗೂ ಎಥೆನಾಲ್ ಉತ್ಪಾದನೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಈ ಯೋಜನೆಯು ಆಡಳಿತಾತ್ಮಕವಾಗಿ ಆಕರ್ಷಕವಾಗಿ ಕಂಡರೂ, ಸೂಕ್ತ ವೈಜ್ಞಾನಿಕ ಅಧ್ಯಯನ ಮತ್ತು ಪೂರ್ವಸನ್ನದ್ಧತೆ ಇಲ್ಲದೆ ಜಾರಿಗೆ ತರುವುದು ಸಾರ್ವಜನಿಕರಲ್ಲಿ ಕಳವಳ ಉಂಟುಮಾಡಿದೆ.
ದೇಶದ ರಸ್ತೆಗಳಲ್ಲಿ ಪ್ರಸ್ತುತ ಚಲಿಸುತ್ತಿರುವ ವಾಹನಗಳಲ್ಲಿ 2023 ಮತ್ತು ಅದಕ್ಕೂ ಮೊದಲು ತಯಾರಾದ ವಾಹನಗಳ ಪ್ರಮಾಣವು ಸುಮಾರು ಶೇಕಡಾ 80 ರಿಂದ 85 ರಷ್ಟಿದೆ ಎಂದು ಅಂದಾಜಿಸಲಾಗಿದೆ. ಈ ಬಹುತೇಕ ಹಳೆಯ ವಾಹನಗಳ ಎಂಜಿನ್‌ಗಳು ಇ20 ಇಂಧನ ಮಿಶ್ರಣಕ್ಕೆ ತಾಂತ್ರಿಕವಾಗಿ ಹೊಂದಿಕೊಳ್ಳುವುದಿಲ್ಲ. ಎಥೆನಾಲ್ ಪ್ರಮಾಣ ಹೆಚ್ಚಾದಂತೆ ವಾಹನಗಳ ಎಂಜಿನ್ ಕಾಂಪೊನೆಂಟ್‌ಗಳು ಬೇಗನೆ ಸವೆದು ಹೋಗುವುದು, ಇಂಧನ ಕ್ಷಮತೆ ಕಡಿಮೆಯಾಗುವುದು ಮತ್ತು ವಾಹನ ದುರಸ್ತಿ ವೆಚ್ಚ ಹೆಚ್ಚಾಗುವುದು ಸೇರಿದಂತೆ ವಾಹನ ಮಾಲಕರಿಗೆ ಭಾರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿದೆ.
ಸಂಸತ್ತಿನಲ್ಲಿ ಇತ್ತೀಚೆಗೆ ನೀಡಲಾದ ಅಧಿಕೃತ ಮಾಹಿತಿಯ ಪ್ರಕಾರ, ದೇಶದಲ್ಲಿ ಇ20 ಇಂಧನಕ್ಕೆ ಸಂಪೂರ್ಣವಾಗಿ ಹೊಂದಾಣಿಕೆಯಾಗದ ವಾಹನಗಳು ಎಷ್ಟಿವೆ ಮತ್ತು ಈ ಹೊಸ ಇಂಧನ ನೀತಿಯಿಂದ ಎಷ್ಟು ವಾಹನಗಳ ಮೇಲೆ ದುಷ್ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಮೌಲ್ಯಮಾಪನ ಅಥವಾ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ ಎಂಬುದು ಸ್ಪಷ್ಟವಾಗಿದೆ. ಯಾವುದೇ ಬೃಹತ್ ನೀತಿಯನ್ನು ಜಾರಿಗೊಳಿಸುವ ಮೊದಲು ಅದರ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸದಿರುವುದು ವೈಜ್ಞಾನಿಕ ನೀತಿ ನಿರೂಪಣಾ ಪ್ರಕ್ರಿಯೆಯಲ್ಲಿನ ಮೂಲಭೂತ ಲೋಪವನ್ನು ಎತ್ತಿಹಿಡಿಯುತ್ತದೆ.
ಆದ್ದರಿಂದ, ಕೋಟ್ಯಂತರ ವಾಹನ ಮಾಲಕರ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರವು ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ತಾಂತ್ರಿಕ ಹಾಗೂ ವೈಜ್ಞಾನಿಕ ಅಧ್ಯಯನ ನಡೆಸಬೇಕಾಗಿದೆ. ಹಳೆಯ ವಾಹನಗಳಿಗೆ ಹಾನಿಯಾಗದಂತೆ ಸಾಮಾನ್ಯ ಪೆಟ್ರೋಲ್ ಇಂಧನದ ಲಭ್ಯತೆಯನ್ನು ಕಾಯ್ದುಕೊಳ್ಳುವುದು ಹಾಗೂ ಇ20 ಇಂಧನ ಬಳಕೆಯಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಲಾಗಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft