
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಈ ಬಾರಿಯ ಕಾರ್ಯಕ್ರಮದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ. ವಿಶೇಷವೆಂದರೆ, ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರಿಗೂ ಸ್ಪರ್ಧಿಸಲು ಅವಕಾಶ ನೀಡಲಾಗಿದ್ದು, ಈಗಾಗಲೇ ಆಡಿಷನ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎನ್ನಲಾಗಿದೆ. ಇದರ ನಡುವೆಯೇ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಬಹುದಾದ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಪಟ್ಟಿಯಲ್ಲಿ ಮಜಾ ಭಾರತ ಖ್ಯಾತಿಯ ಶಿವು ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಶಿವು, ಹಾಸ್ಯ ಕಾರ್ಯಕ್ರಮಗಳು ಮತ್ತು ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿದ್ದು, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅದೇ ರೀತಿ ‘ಹಳ್ಳಿ ಪವರ್’ ಕಾರ್ಯಕ್ರಮದ ವಿಜೇತೆ ರಗಡ್ ರಶ್ಮಿ ಅವರ ಹೆಸರೂ ಸಂಭಾವ್ಯ ಪಟ್ಟಿಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅವರು ತಮ್ಮ ನೇರ ಮಾತು ಮತ್ತು ವಿಭಿನ್ನ ವ್ಯಕ್ತಿತ್ವದಿಂದಲೇ ಗಮನ ಸೆಳೆದಿದ್ದು, ಬಿಗ್ ಬಾಸ್ ಮನೆಯಲ್ಲಿ ಬಲಿಷ್ಠ ಸ್ಪರ್ಧಿಯಾಗುವ ಸಾಧ್ಯತೆ ಇದೆ ಎಂಬ ಚರ್ಚೆ ಜೋರಾಗಿದೆ.
‘ಎಕ್ಸ್ಕ್ಯೂಸ್ ಮಿ’ ಖ್ಯಾತಿಯ ನಟ ಸುನೀಲ್ ರಾವ್ ಅವರ ಹೆಸರು ಕೂಡ ವೈರಲ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಬಾಲನಟನಾಗಿ ಆರಂಭಿಸಿ ಹಲವು ಸಿನಿಮಾ ಹಾಗೂ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಸುನೀಲ್ ರಾವ್ ಈ ಬಾರಿ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಳ್ಳಬಹುದು ಎನ್ನುವ ನಿರೀಕ್ಷೆ ವ್ಯಕ್ತವಾಗಿದೆ.
ಇದರ ಜೊತೆಗೆ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಮೂಲಕ ಜನಪ್ರಿಯರಾದ ಕೋಳಿ ರಮ್ಯಾ ಅವರ ಹೆಸರೂ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದೆ. ವಿವಿಧ ಭಾಷೆಗಳ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅವರು, ಪ್ರಸ್ತುತ ಧಾರಾವಾಹಿ ಮುಕ್ತಾಯವಾದರೆ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿರುವ ಕಂಟೆಂಟ್ ಕ್ರಿಯೇಟರ್ ಶಿವಪುತ್ರ ಅವರ ಹೆಸರೂ ಪಟ್ಟಿಯಲ್ಲಿ ಕೇಳಿಬರುತ್ತಿದೆ.
ಆದರೆ, ಈವರೆಗೆ ಬಿಗ್ ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿಗಳ ಅಧಿಕೃತ ಪಟ್ಟಿಯನ್ನು ವಾಹಿನಿ ಪ್ರಕಟಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪಟ್ಟಿ ಕೇವಲ ಸಂಭಾವ್ಯ ಅಭ್ಯರ್ಥಿಗಳದ್ದಾಗಿದ್ದು, ಅಧಿಕೃತ ಘೋಷಣೆಯ ಬಳಿಕವೇ ಅಂತಿಮ ಸ್ಪರ್ಧಿಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.



