News Technology

AI ಫೋನ್‌ಗಳ ಹಿಂದೆ ಓಡಿದ ಗ್ರಾಹಕರು; ಆದರೂ ವೇಗ, ಬ್ಯಾಟರಿ ವಿಚಾರದಲ್ಲಿ ರಾಜಿಯೇ ಇಲ್ಲ! ಗ್ರಾಹಕರ ಈಗಿನ ಬೇಡಿಕೆಗಳೇನು?

ನವದೆಹಲಿ, ಆಗಸ್ಟ್ 19: ಸ್ಮಾರ್ಟ್‌ಫೋನ್ ಖರೀದಿದಾರರಲ್ಲಿ ಕೃತಕ ಬುದ್ಧಿಮತ್ತೆ (AI) ಸೌಲಭ್ಯ ಹೊಂದಿರುವ ಫೋನ್‌ಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಅಮೆಜಾನ್ ಜುಲೈನಲ್ಲಿ ನಡೆಸಿದ ಮಾರುಕಟ್ಟೆ ಸಮೀಕ್ಷೆಯ ಪ್ರಕಾರ, ಸುಮಾರು ಶೇ.82ರಷ್ಟು ಗ್ರಾಹಕರು AI ಸಕ್ರಿಯಗೊಂಡಿರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ. ಸಂದರ್ಭೋಚಿತ ಸಲಹೆ, ಚಿತ್ರ ಸಂಪಾದನೆ ಹಾಗೂ ದೃಶ್ಯ ಹುಡುಕಾಟದಂತಹ AI ಸೌಲಭ್ಯಗಳು ಗ್ರಾಹಕರ ಗಮನ ಸೆಳೆಯುತ್ತಿವೆ.

ಸಮೀಕ್ಷೆಯಲ್ಲಿ ಶೇ.25ರಷ್ಟು ಮಂದಿ ತಮ್ಮ ಚಟುವಟಿಕೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಸಲಹೆ ನೀಡುವ ಫೋನ್‌ಗಳನ್ನು ಬಯಸಿದ್ದಾರೆ. ಶೇ.18ರಷ್ಟು ಮಂದಿ ಜನರೇಟಿವ್ ಫೋಟೋ ಎಡಿಟಿಂಗ್, ಶೇ.17ರಷ್ಟು ಮಂದಿ ದೃಶ್ಯ ಹುಡುಕಾಟ ಹಾಗೂ ಶೇ.11ರಷ್ಟು ಮಂದಿ ಹೊಂದಾಣಿಕೆಯ ಬ್ಯಾಟರಿ ನಿರ್ವಹಣೆಯಂತಹ ಸೌಲಭ್ಯಗಳಿಗೆ ಆದ್ಯತೆ ನೀಡಿದ್ದಾರೆ.

ಆದರೆ AI ಸೌಲಭ್ಯಗಳ ಬೇಡಿಕೆ ಹೆಚ್ಚಾದರೂ ಸ್ಮಾರ್ಟ್‌ಫೋನ್‌ನ ಮೂಲ ಕಾರ್ಯಕ್ಷಮತೆಯ ವಿಚಾರದಲ್ಲಿ ಗ್ರಾಹಕರು ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ. ಶೇ.87ರಷ್ಟು ಮಂದಿ ಫೋನ್ ವೇಗವಾಗಿ ಮತ್ತು ಉತ್ತಮ ಕಾರ್ಯಕ್ಷಮತೆಯೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಶೇ.79ರಷ್ಟು ಮಂದಿ ಉತ್ತಮ ಬ್ಯಾಟರಿ ಬಾಳಿಕೆಗೆ ಹಾಗೂ ಶೇ.77ರಷ್ಟು ಮಂದಿ ಕ್ಯಾಮರಾ ಗುಣಮಟ್ಟಕ್ಕೆ ಆದ್ಯತೆ ನೀಡಿದ್ದಾರೆ. ಬ್ಯಾಟರಿ ಸಮಸ್ಯೆಯೇ ಗ್ರಾಹಕರಿಗೆ ಹೆಚ್ಚು ಕಾಡುತ್ತಿರುವ ಅಂಶವಾಗಿದ್ದು, ಶೇ.22ರಷ್ಟು ಮಂದಿ ಇದನ್ನು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.

ಬೆಲೆಯ ವಿಚಾರದಲ್ಲಿಯೂ ದುಬಾರಿ ಫೋನ್‌ಗಳತ್ತ ಗ್ರಾಹಕರ ಆಸಕ್ತಿ ಕಂಡುಬಂದಿದೆ. ಮೂವರಲ್ಲಿ ಒಬ್ಬರು ತಮ್ಮ ಮುಂದಿನ ಸ್ಮಾರ್ಟ್‌ಫೋನ್‌ಗಾಗಿ ₹50,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಖರ್ಚು ಮಾಡಲು ಸಿದ್ಧರಾಗಿದ್ದಾರೆ. ಶೇ.42ರಷ್ಟು ಮಂದಿ ₹25,000ರಿಂದ ₹50,000ದೊಳಗಿನ ಫೋನ್‌ಗಳನ್ನು ಖರೀದಿಸಲು ಬಯಸಿದ್ದಾರೆ. ಸಮೀಕ್ಷೆಯ ಫಲಿತಾಂಶವು AI ಭವಿಷ್ಯದ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಆಕರ್ಷಣೆಯಾಗುತ್ತಿದ್ದರೂ, ವೇಗ, ಬ್ಯಾಟರಿ ಬಾಳಿಕೆ ಮತ್ತು ಕ್ಯಾಮರಾ ಗುಣಮಟ್ಟದಂತಹ ಮೂಲಭೂತ ಸೌಲಭ್ಯಗಳೇ ಖರೀದಿ ನಿರ್ಧಾರದಲ್ಲಿ ಇನ್ನೂ ನಿರ್ಣಾಯಕವಾಗಿವೆ ಎಂಬುದನ್ನು ತೋರಿಸಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft