
LPG prices revised on 2025 December 1st: ಕಮರ್ಷಿಯಲ್ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ಡಿಸೆಂಬರ್ ತಿಂಗಳಲ್ಲೂ ಇಳಿಕೆಯಾಗಿದೆ. 19 ಕಿಲೋ ಸಿಲಿಂಡರ್ ಬೆಲೆಯಲ್ಲಿ 10.50 ರೂ ತಗ್ಗಿದೆ. 47.50 ಕಿಲೋ ಸಿಲಿಂಡರ್ ಬೆಲೆಯಲ್ಲಿ 25.50 ರೂ ಕಡಿಮೆ ಆಗಿದೆ. ಕಳೆದ ಒಂದು ವರ್ಷದಲ್ಲಿ ಹತ್ತು ಬಾರಿ ಕಮರ್ಷಿಯಲ್ ಸಿಲಿಂಡರ್ ಬೆಲೆ ಕಡಿಮೆಗೊಂಡಿದೆ. ಇದೇ ವೇಳೆ, ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ ಇಳಿಕೆ ಆಗಿಲ್ಲ.
ಬೆಂಗಳೂರು, ಡಿಸೆಂಬರ್ 1: ಕಮರ್ಷಿಯಲ್ ಎಲ್ಪಿಜಿ ಗ್ಯಾಸ್ ಬೆಲೆಯಲ್ಲಿ (Commercial LPG price) ಇಳಿಕೆಯಾಗಿದೆ. 19 ಕಿಲೋ ಎಲ್ಪಿಜಿ ಬೆಲೆ 10-10.50 ರೂ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ 10.50 ರೂಗೆ ಇಳಿದಿದೆ. 47.5 ಕಿಲೋ ಎಲ್ಪಿಜಿ ಗ್ಯಾಸ್ ಬೆಲೆ 25.50 ರೂನಷ್ಟು ತಗ್ಗಿದೆ. ಉಳಿದ ಗೃಹಬಳಕೆ ಅಡುಗೆ ಅನಿಲದ (Domestic LPG cylinder) ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.
ಡಿಸೆಂಬರ್ 1ರಿಂದ 19 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 1,654 ರೂ ಆಗಿದೆ. 47.5 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 4,132.50 ರೂಗೆ ಇಳಿದಿದೆ. ಇನ್ನು, ಗೃಹಬಳಕೆಯ 14.2 ಕಿಲೋ ಎಲ್ಪಿಜಿ ಬೆಲೆ 855.5 ರೂ, ಹಾಗೂ 5 ಕಿಲೋ ಸಿಲಿಂಡರ್ ಬೆಲೆ 318.50 ರೂನಲ್ಲಿ ಮುಂದುವರಿದಿದೆ.
ಬೆಂಗಳೂರಿನಲ್ಲಿ 2025ರ ಡಿ.1 ರಿಂದ ಎಲ್ಪಿಜಿ ದರಗಳ ಪಟ್ಟಿ
- 14.2 ಕಿಲೋ ಗೃಹಬಳಕೆ ಎಲ್ಪಿಜಿ: 855.50 ರೂ
- 5 ಕಿಲೋ ಗೃಹಬಳಕೆ ಎಲ್ಪಿಜಿ: 318.50 ರೂ
- 19 ಕಿಲೋ ವಾಣಿಜ್ಯಬಳಕೆ ಎಲ್ಪಿಜಿ: 1,654 ರೂ
- 47.50 ಕಿಲೋ ವಾಣಿಜ್ಯ ಬಳಕೆ ಎಲ್ಪಿಜಿ: 4,132.50 ರೂ
ಕಮರ್ಷಿಯಲ್ ಗ್ಯಾಸ್ ಬೆಲೆಗಳಲ್ಲಿ ಸತತ ಇಳಿಕೆ
ಕಳೆದ ಒಂದು ವರ್ಷದಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ಭಾರತದಲ್ಲಿ ಬಹುತೇಕ ನಿರಂತರವಾಗಿ ಇಳಿದಿದೆ. ಕಳೆದ 12 ತಿಂಗಳಲ್ಲಿ 10 ಬಾರಿ ಬೆಲೆ ಇಳಿದಿದೆ. ಎರಡು ತಿಂಗಳು ಮಾತ್ರವೇ ಬೆಲೆ ಏರಿಕೆ ಆಗಿದ್ದು. ಜನವರಿಯಲ್ಲಿ ಬೆಂಗಳೂರಿನಲ್ಲಿ 19 ಕಿಲೋ ಸಿಲಿಂಡರ್ ಬೆಲೆ 1,874.50 ರೂ ಇತ್ತು. ಇದೀಗ 1,654 ರೂಗೆ ಇಳಿದಿದೆ. ಒಂದು ವರ್ಷದಲ್ಲಿ ಈ ಕಮರ್ಷಿಯಲ್ ಗ್ಯಾಸ್ ಬೆಲೆ ಸಿಲಿಂಡರ್ಗೆ 220.50 ರೂ ಇಳಿಕೆ ಆಗಿದೆ.
ಇದೇ ವೇಳೆ, ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಈ ಒಂದು ವರ್ಷ ಯಾವುದೇ ಇಳಿಕೆ ಆಗಿಲ್ಲ. ಕಳೆದ ಒಂದು ವರ್ಷದಲ್ಲಿ ಒಮ್ಮೆ 50 ರೂ ಬೆಲೆ ಏರಿಕೆಯೂ ಆಗಿದೆ.
ವಿವಿಧ ನಗರಗಳಲ್ಲಿ 19 ಕಿಲೋ ಎಲ್ಪಿಜಿ ದರಗಳು
- ದೆಹಲಿ: 1,580.50 ರೂ
- ಕೋಲ್ಕತಾ: 1,684 ರೂ
- ಮುಂಬೈ: 1,531.50 ರೂ
- ಚೆನ್ನೈ: 1,739.50 ರೂ
- ಬೆಂಗಳೂರು: 1,654 ರೂ
ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಎಲ್ಪಿಜಿ ಸಿಗುವುದು ಮುಂಬೈನಲ್ಲಿ. ಅತಿ ದುಬಾರಿ ಎನಿಸಿರುವುದು ಚೆನ್ನೈನಲ್ಲಿ. ವಿವಿಧ ರಾಜ್ಯಗಳು ಎಲ್ಪಿಜಿ ಮೇಲೆ ಬೇರೆ ಬೇರೆ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತವೆ. ಹೀಗಾಗಿ, ರಾಜ್ಯದಿಂದ ರಾಜ್ಯಕ್ಕೆ ಗ್ಯಾಸ್ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ




