
ಹೊಸದಿಲ್ಲಿ, ಆಗಸ್ಟ್ 24: ದೇಶದ ವಿವಿಧ ಭಾಗಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಈರುಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಆತಂಕದ ನಡುವೆ, ಮಹಾರಾಷ್ಟ್ರದ ನಾಸಿಕ್ನಿಂದ ದೇಶದ ಪ್ರಮುಖ ನಗರಗಳಿಗೆ ಈರುಳ್ಳಿ ಸಾಗಿಸಲು ‘ಕಾಂದಾ ಎಕ್ಸ್ಪ್ರೆಸ್’ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಈರುಳ್ಳಿಯ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು ₹42ಕ್ಕೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲೂ ದರದಲ್ಲಿ ಹೆಚ್ಚಳ ಕಂಡುಬಂದಿದ್ದು, ಇದರಿಂದ ಅಡುಗೆ ಮನೆಯ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬೀಳುವ ಆತಂಕ ಎದುರಾಗಿದೆ.
ಬೆಲೆ ಹೆಚ್ಚಿರುವ ಪ್ರದೇಶಗಳಿಗೆ ಈರುಳ್ಳಿಯ ಪೂರೈಕೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತನ್ನ ಸಂಗ್ರಹದಲ್ಲಿರುವ ಈರುಳ್ಳಿಯನ್ನು ಬಳಸಿಕೊಳ್ಳಲಿದೆ. ನಾಸಿಕ್ನಿಂದ ದಿಲ್ಲಿ, ಚೆನ್ನೈ, ಕೊಚ್ಚಿ ಹಾಗೂ ಗುವಾಹಟಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಗೆ ರೈಲಿನ ಮೂಲಕ ಈರುಳ್ಳಿ ಸಾಗಿಸುವ ಯೋಜನೆ ರೂಪಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ತಲುಪುವುದರಿಂದ ಬೆಲೆ ನಿಯಂತ್ರಣಕ್ಕೆ ಬರಬಹುದು ಎಂಬ ನಿರೀಕ್ಷೆಯಿದೆ.
ಈ ಹಿಂದೆ ಕೂಡ ಈರುಳ್ಳಿ ಬೆಲೆ ನಿಯಂತ್ರಣಕ್ಕಾಗಿ ‘ಕಾಂದಾ ಎಕ್ಸ್ಪ್ರೆಸ್’ ಮಾದರಿಯ ರೈಲು ಸೇವೆಯನ್ನು ಬಳಸಲಾಗಿತ್ತು. ಇದೀಗ ಮತ್ತೆ ರೈಲು ಮಾರ್ಗದ ಮೂಲಕ ತ್ವರಿತವಾಗಿ ಈರುಳ್ಳಿ ಸಾಗಿಸುವ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ಲಭ್ಯವಾಗುವಂತೆ ಮಾಡುವ ಗುರಿ ಹೊಂದಿದೆ.



