
ಹೊಸದಿಲ್ಲಿ, ಆಗಸ್ಟ್ 21, 2026: ಜುಲೈ 20ರಂದು ನಡೆದ ‘ಸಂಸತ್ ಚಲೋ’ ಪ್ರತಿಭಟನೆಯ ವೇಳೆ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದ 19 ವರ್ಷದ ಸಾಹಿಲ್ ಲೋಚಬ್ ಅವರೊಂದಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿದರು. ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಬೇಕೆಂದು ಅವರು ಪೊಲೀಸರನ್ನು ಒತ್ತಾಯಿಸಿದರು.
ಪೆಲೆಟ್ ಗನ್‌ನಿಂದ ಗಾಯಗೊಂಡಿರುವ ಬಗ್ಗೆ ದೂರು ನೀಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಅವರು ಪೊಲೀಸ್ ಠಾಣೆಯ ಹೊರಭಾಗದಲ್ಲಿ ಧರಣಿ ನಡೆಸಿದರು. ಇದರಿಂದ ಠಾಣೆ ಎದುರು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಜುಲೈ 20ರಂದು ನಡೆದ ‘ಸಂಸತ್ ಚಲೋ’ ಮೆರವಣಿಗೆಯಲ್ಲಿ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಸಿಬ್ಬಂದಿ ಪೆಲೆಟ್ ಗನ್ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪ್ರತಿಭಟನೆಯ ವೇಳೆ ಸಾಹಿಲ್ ಲೋಚಬ್ ಗಾಯಗೊಂಡಿದ್ದು, ಈ ಕುರಿತು ತನಿಖೆ ನಡೆಸಿ ಪ್ರಕರಣ ದಾಖಲಿಸಬೇಕು ಎಂಬ ಆಗ್ರಹ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಆದರೆ, ಪ್ರತಿಭಟನೆಯ ಸಂದರ್ಭದಲ್ಲಿ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪವನ್ನು ದಿಲ್ಲಿ ಪೊಲೀಸರು ಪದೇಪದೇ ನಿರಾಕರಿಸಿದ್ದಾರೆ. ಗಾಯಗೊಂಡ ಯುವಕನ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕು ಎಂಬುದು ರಾಹುಲ್ ಗಾಂಧಿ ಅವರ ಒತ್ತಾಯವಾಗಿದೆ.



