GULF News

ಹಾರ್ಮುಝ್ ಜಲಸಂಧಿ ಪ್ರವೇಶದ ಮೂಲಕ ಸಾಗುವ ಹಡಗುಗಳಲ್ಲಿ ಕೆಲಸ ಮಾಡಲು 16 ಭಾರತೀಯ ನಾವಿಕರ ನಕಾರ: ಜೀವದ ಹಂಗು ತೊರೆದು ಸಾಗಲು ಒತ್ತಡ ಆರೋಪ

ಹೊಸದಿಲ್ಲಿ, ಆ.18: ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅಪಾಯಕಾರಿ ವಲಯವಾಗಿ ಗುರುತಿಸಲ್ಪಟ್ಟಿರುವ ಹಾರ್ಮುಝ್ ಜಲಸಂಧಿ ಮೂಲಕ ಸಾಗಲು 16 ಭಾರತೀಯ ನಾವಿಕರು ನಿರಾಕರಿಸಿದ್ದು, ತಮ್ಮ ಜೀವಕ್ಕೆ ಅಪಾಯವಿದೆ ಎಂದು ತುರ್ತು ನೆರವಿಗಾಗಿ ಮನವಿ ಮಾಡಿದ್ದಾರೆ. ಮಾರ್ಷಲ್ ದ್ವೀಪದ ಧ್ವಜ ಹೊಂದಿರುವ ‘ಎಎಂ ಪಯೋನಿಯರ್’ ಹಡಗಿನ ಮಾಲಕರು ಹಾಗೂ ವ್ಯವಸ್ಥಾಪಕರು ಸಿಬ್ಬಂದಿಯನ್ನು ಹಾರ್ಮುಝ್ ಮೂಲಕ ಸಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (ಎಫ್‌ಎಸ್‌ಯುಐ) ಆರೋಪಿಸಿದೆ.

ಎಫ್‌ಎಸ್‌ಯುಐ ಪ್ರಕಾರ, ಹಾರ್ಮುಝ್ ಪ್ರದೇಶದಲ್ಲಿನ ಸಂಘರ್ಷದಿಂದ ಉಂಟಾಗಿರುವ ಅಪಾಯದ ಹಿನ್ನೆಲೆಯಲ್ಲಿ ಹಡಗಿನ ಕ್ಯಾಪ್ಟನ್ ಹಾಗೂ ಸಿಬ್ಬಂದಿ ಆ ಮಾರ್ಗದಲ್ಲಿ ಸಾಗಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಸಂಪರ್ಕ ವ್ಯವಸ್ಥೆಗಳು ಸೇರಿದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಅಪಾಯಕಾರಿ ಪ್ರದೇಶದಲ್ಲಿ ಹಡಗು ನಡೆಸಲು ತಾವು ಸಿದ್ಧರಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಆದರೂ ಹಡಗಿನ ಮಾಲಕರು ಹಾಗೂ ವ್ಯವಸ್ಥಾಪಕರು ಪ್ರಯಾಣ ಮುಂದುವರಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಸಂಘಟನೆ ಹೇಳಿದೆ.

ಹಡಗಿನ ಮಾಸ್ಟರ್ ಅನಿಲ್ ರಾಜ್ ಅವರು ಕೂಡ ಕಂಪೆನಿಯು ಹಾರ್ಮುಝ್ ಮೂಲಕ ಫುಜೈರಾ ಬಂದರು ತಲುಪುವಂತೆ ತಮ್ಮ ಮೇಲೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಾರೆ. ಕಂಪೆನಿಯು ಆರಂಭದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಪ್ರಯತ್ನಿಸಿತ್ತು ಹಾಗೂ ಹಾರ್ಮುಝ್ ಮೂಲಕ ಸಾಗಲು ಅಮೆರಿಕದ ರಕ್ಷಣಾ ಪಡೆಗಳಿಂದ ವಾಯು ಭದ್ರತೆ ಒದಗಿಸುವಂತೆ ಮನವಿ ಮಾಡಿತ್ತು ಎಂದು ಅವರು ತಿಳಿಸಿದ್ದಾರೆ. ಆದರೆ ಇದೀಗ ಪರ್ಯಾಯ ಮಾರ್ಗದ ಮೂಲಕ ಹಡಗನ್ನು ಹಾರ್ಮುಝ್ ಮೂಲಕ ಕರೆದೊಯ್ಯಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

16 ಭಾರತೀಯ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಲು ಕೇಂದ್ರ ಸರಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಎಫ್‌ಎಸ್‌ಯುಐ ಆಗ್ರಹಿಸಿದೆ. ಸಿಬ್ಬಂದಿಗೆ ಬಾಕಿ ವೇತನ ಸೇರಿದಂತೆ ಸಂಪೂರ್ಣ ವೇತನ ಪಾವತಿಸಿ, ಅವರನ್ನು ಸುರಕ್ಷಿತವಾಗಿ ತಕ್ಷಣ ಸ್ವದೇಶಕ್ಕೆ ಕರೆತರಬೇಕು ಎಂದು ಸಂಘಟನೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯಕ್ಕೆ ಮನವಿ ಮಾಡಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft