
ಬಾಗಲಕೋಟೆ, ಆ.14: ಬಾಗಲಕೋಟೆಯಲ್ಲಿ ಜುಲೈ 25ರಂದು ನಡೆದಿದ್ದ ಕಾರು ಸ್ಫೋಟ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಕಾರಿನಲ್ಲಿ ಸ್ಫೋಟಕ ಇರಿಸಲಾಗಿತ್ತು ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
ಜುಲೈ 25ರಂದು ರಾತ್ರಿ 10.45ರ ಸುಮಾರಿಗೆ ಕಾರು ಸ್ಫೋಟಗೊಂಡ ಬಳಿಕ ಬಾಂಬ್ ನಿಷ್ಕ್ರಿಯ ದಳ ಹಾಗೂ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿತ್ತು. ಎಫ್‌ಎಸ್‌ಎಲ್‌ನ ಪ್ರಾಥಮಿಕ ವರದಿಯಲ್ಲಿ ಸ್ಫೋಟಕ ಬಳಸಿ ಸ್ಫೋಟ ನಡೆಸಿರುವುದು ದೃಢಪಟ್ಟಿತ್ತು. ತನಿಖೆಯ ವೇಳೆ ಬಾರ್ ಮಾಲೀಕ ಹನುಮಂತ ಅಥಣಿ ಅವರನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಲಾಗಿತ್ತು ಎಂಬುದು ಪೊಲೀಸರಿಗೆ ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಪ್ರಕರಣದ ಎ1 ಆರೋಪಿ ಶಿವಾನಂದ ಅವರ ದೊಡ್ಡಪ್ಪ ಹನುಮಂತ ಅವರಿಂದ 40 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಐದು ಎಕರೆ ಜಮೀನು ಹನುಮಂತ ಅವರ ಹೆಸರಿಗೆ ಮಾಡಿಕೊಡಲಾಗಿತ್ತು. ಬಳಿಕ ಬಡ್ಡಿ ಸೇರಿ ಸಾಲದ ಮೊತ್ತ 67 ಲಕ್ಷ ರೂ.ಗೆ ಏರಿಕೆಯಾದ ಹಿನ್ನೆಲೆಯಲ್ಲಿ ಜಮೀನು ಮರಳಿ ಪಡೆಯಲು ಹನುಮಂತ ಅವರ ಕೊಲೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಸ್ಫೋಟಕ ಬಳಸಿ ಕಾರನ್ನು ಸ್ಫೋಟಿಸುವ ಪ್ರಯತ್ನವೂ ಇದೇ ಸಂಚಿನ ಭಾಗವಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಸಿಸಿಟಿವಿ ಮತ್ತು ಮೊಬೈಲ್‌ಗಳ ಮೂಲಕ ಸುಳಿವು ಸಿಗದಂತೆ ಆರೋಪಿಗಳು ಎಚ್ಚರಿಕೆ ವಹಿಸಿದ್ದರೂ, ತನಿಖೆ ಮುಂದುವರಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಸ್ಫೋಟಕ ವಸ್ತುಗಳನ್ನು ಪೂರೈಸಿದ ಅಂಗಡಿ ಮಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿರುವುದರಿಂದ ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಎಸ್‌ಪಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.



