
ಡೆಹ್ರಾಡೂನ್, ಆ.14: ಉತ್ತರಾಖಂಡದ ಚಮೋಲಿ ಜಿಲ್ಲೆಯ ಪಿಪಲ್ಕೋಟಿ ಬಳಿಯ ಮಾಯಾಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗಕ್ಕೆ ಏಕಾಏಕಿ ನೀರು ಮತ್ತು ಅವಶೇಷಗಳು ನುಗ್ಗಿ ಸಂಭವಿಸಿದ ಭೀಕರ ದುರಂತದಲ್ಲಿ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 22 ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದು, 14 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ನಾಪತ್ತೆಯಾಗಿರುವ ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಗುರುವಾರ ಸಂಜೆ ಸುಮಾರು 7.05ರ ವೇಳೆಗೆ ಸುರಂಗದ ಮೇಲ್ಭಾಗದಲ್ಲಿ ಭೂಕುಸಿತ ಸಂಭವಿಸಿ, ಸುಮಾರು 1.4 ಕಿ.ಮೀ. ದೂರದಲ್ಲಿ ಗುಂಡಿಯೊಂದು ನಿರ್ಮಾಣವಾಗಿದ್ದು, ಅದರ ಮೂಲಕ ನೀರು ಮತ್ತು ಅವಶೇಷಗಳು ಸುರಂಗದೊಳಗೆ ನುಗ್ಗಿವೆ ಎಂದು ವರದಿಯಾಗಿದೆ. ನಿರ್ಮಾಣ ಕಾಮಗಾರಿಯನ್ನು ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ ನಡೆಸುತ್ತಿದ್ದು, ಯೋಜನೆ ಟಿಎಚ್ಡಿಸಿಗೆ ಸಂಬಂಧಿಸಿದೆ.
ಈ ದುರಂತದ ಬೆನ್ನಲ್ಲೇ ಕಾರ್ಮಿಕರ ಸುರಕ್ಷತೆ, ನಿರ್ಮಾಣ ಕಾಮಗಾರಿಯ ಮೇಲ್ವಿಚಾರಣೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಸ್ಥಳೀಯ ಆಡಳಿತ ಮತ್ತು ಬಿಜೆಪಿ ಸರ್ಕಾರದ ಅಧಿಕಾರಿಗಳು ಸುರಂಗ ಕಾಮಗಾರಿಯ ಸುರಕ್ಷತಾ ಮಾನದಂಡಗಳ ಬಗ್ಗೆ ಸಮರ್ಪಕ ನಿಗಾ ವಹಿಸದೆ ನಿರ್ಲಕ್ಷ್ಯ ತೋರಿದ್ದಾರೆಯೇ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ದುರಂತಕ್ಕೆ ನಿಖರ ಕಾರಣ ಮತ್ತು ಯಾರಾದರೂ ತಪ್ಪಿತಸ್ಥರೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಪ್ರಾಥಮಿಕವಾಗಿ ಭೂಕುಸಿತ ಹಾಗೂ ನೀರು ಸೋರಿಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದ ಬಳಿಕ ಸೇನೆ, ಐಟಿಬಿಪಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸುರಂಗದಲ್ಲಿನ ನೀರನ್ನು ಹೊರಹಾಕಲು ಪಂಪ್ಗಳನ್ನು ಅಳವಡಿಸಲಾಗಿದ್ದು, ಸಿಲುಕಿರುವವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಕಾರ್ಮಿಕರ ಜೀವಕ್ಕೆ ಬೆಲೆ ನೀಡದೆ ಅಭಿವೃದ್ಧಿ ಕಾಮಗಾರಿಗಳನ್ನು ಮುನ್ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂಬ ಒತ್ತಾಯವೂ ಇದೀಗ ಕೇಳಿಬರುತ್ತಿದೆ.



