News

279 ಮಂದಿ ಬಲಿಯಾಗಿದ್ದ 2019ರ ಈಸ್ಟರ್ ಸಂಡೇ ಭೀಕರ ಬಾಂಬ್ ದಾಳಿ ಪ್ರಕರಣ: ಕರ್ತವ್ಯ ಲೋಪದಡಿ ಶ್ರೀಲಂಕಾದ ಇಬ್ಬರು ಮಾಜಿ ಉನ್ನತಾಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ

ಕೊಲಂಬೊ, ಆಗಸ್ಟ್ 3, 2026: 2019ರಲ್ಲಿ ಶ್ರೀಲಂಕಾದಲ್ಲಿ ಸಂಭವಿಸಿ 279 ಜನರ ದಾರುಣ ಸಾವು ಹಾಗೂ 500ಕ್ಕೂ ಹೆಚ್ಚು ಜನರ ಗಾಯಕ್ಕೆ ಕಾರಣವಾಗಿದ್ದ ಭೀಕರ ಈಸ್ಟರ್ ಸಂಡೇ ಆತ್ಮಾಹುತಿ ಬಾಂಬ್ ದಾಳಿಯ ಪ್ರಕರಣದಲ್ಲಿ ಶ್ರೀಲಂಕಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಂಚಿತವಾಗಿ ಗುಪ್ತಚರ ಎಚ್ಚರಿಕೆಗಳು ಬಂದಿದ್ದರೂ ದಾಳಿ ತಡೆಯುವಲ್ಲಿ ಗಂಭೀರ ಕರ್ತವ್ಯ ಲೋಪ ಹಾಗೂ ಕ್ರಿಮಿನಲ್ ನಿರ್ಲಕ್ಷ್ಯ ವಹಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ದೇಶದ ಮಾಜಿ ಪೊಲೀಸ್ ಮುಖ್ಯಸ್ಥ ಪೂಜಿತ್ ಜಯಸುಂದರ ಹಾಗೂ ರಕ್ಷಣಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೊ ಅವರಿಗೆ ಮೂವರು ನ್ಯಾಯಾಧೀಶರಿದ್ದ ವಿಶೇಷ ಪೀಠವು 2-1 ಬಹುಮತದ ನಿರ್ಧಾರದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ಈ ಹಿಂದೆ 2022ರಲ್ಲಿ ಈ ಇಬ್ಬರೂ ಅಧಿಕಾರಿಗಳನ್ನು ಕೆಳ ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಆದರೆ, ಸರ್ಕಾರದ ಮೇಲ್ಮನವಿಯ ನಂತರ ವಿಶೇಷ ತ್ವರಿತ ನ್ಯಾಯಾಲಯವಾಗಿ ಕಾರ್ಯಾಚರಿಸಿದ ಹೈಕೋರ್ಟ್ ಪೀಠವು ಇದೀಗ ಈ ಕಠಿಣ ತೀರ್ಪನ್ನು ಪ್ರಕಟಿಸಿದೆ. 2019ರ ಏಪ್ರಿಲ್ 4ರಂದೇ ಭಾರತೀಯ ಗುಪ್ತಚರ ಸಂಸ್ಥೆಯು ಮುಂಬರುವ ಸಂಭಾವ್ಯ ಆತ್ಮಾಹುತಿ ದಾಳಿಯ ಕುರಿತು ಶ್ರೀಲಂಕಾ ಸರ್ಕಾರ ಹಾಗೂ ಭದ್ರತಾ ಅಧಿಕಾರಿಗಳಿಗೆ ಸ್ಪಷ್ಟ ಮುನ್ಸೂಚನೆ ನೀಡಿದ್ದರೂ ಸಹ, ಈ ಅಧಿಕಾರಿಗಳು ಯಾವುದೇ ಸೂಕ್ತ ಮುನ್ನೆಚ್ಚರಿಕೆ ಅಥವಾ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗಿದ್ದರೆಂದು ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ.
ಇನ್ನು ಪ್ರಕರಣದ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಆರೋಪಿಗಳ ಪರ ವಕೀಲರು, ಅಧಿಕಾರಿಗಳಿಗೆ ಕೊಲ್ಲುವ ಯಾವುದೇ ಉದ್ದೇಶವಿರಲಿಲ್ಲ ಮತ್ತು ದಾಳಿ ನಡೆಸಿದ ಉಗ್ರರೊಂದಿಗೆ ಅವರಿಗೆ ನೇರ ಸಂಪರ್ಕವಿರಲಿಲ್ಲ ಎಂಬುದನ್ನು ನ್ಯಾಯಾಲಯದ ಭಿನ್ನಾಭಿಪ್ರಾಯದ ತೀರ್ಪು ಸ್ಪಷ್ಟಪಡಿಸುತ್ತದೆ ಎಂದು ತಿಳಿಸಿದ್ದು, ಮುಂದಿನ ಎರಡು ವಾರಗಳ ಒಳಗೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ, ಶ್ರೀಲಂಕಾದಲ್ಲಿ 1976ರಿಂದಲೂ ಮರಣದಂಡನೆ ಜಾರಿಗೆ ಅಮಾನತು (ಮೊರಟೋರಿಯಂ) ಇರುವುದರಿಂದ, ಪ್ರಾಯೋಗಿಕವಾಗಿ ಈ ಮರಣದಂಡನೆ ಶಿಕ್ಷೆಯು ಜೀವಾವಧಿ ಜೈಲು ಶಿಕ್ಷೆಯಾಗಿ ಮಾರ್ಪಡಲಿದೆ.
ಅಷ್ಟೇ ಅಲ್ಲದೆ, ಶ್ರೀಲಂಕಾದ ಕ್ಯಾಥೊಲಿಕ್ ಚರ್ಚ್ ಈ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ್ದು, ಪ್ರಸ್ತುತ ಶಿಕ್ಷೆಗೊಳಗಾದವರು ಕೇವಲ ಕರ್ತವ್ಯ ಲೋಪ ಎಸಗಿದವರಾಗಿದ್ದಾರೆ ಹೊರತು ಬಾಂಬ್ ದಾಳಿಯ ಅಸಲಿ ಮಾಸ್ಟರ್‌ಮೈಂಡ್‌ಗಳಲ್ಲ, ಈ ದಾಳಿಯ ಹಿಂದೆ ಇನ್ನೂ ದೊಡ್ಡ ರಾಜಕೀಯ ಮತ್ತು ಭದ್ರತಾ ಪಿತೂರಿ ಅಡಗಿದೆ ಎಂದು ಆರೋಪಿಸಿದೆ. 2019ರ ಏಪ್ರಿಲ್‌ನಲ್ಲಿ ಮೂರು ಐಷಾರಾಮಿ ಹೋಟೆಲ್‌ಗಳು ಹಾಗೂ ಮೂರು ಪ್ರಮುಖ ಚರ್ಚ್‌ಗಳ ಮೇಲೆ ನಡೆದ ಈ ಭೀಕರ ದಾಳಿಯಲ್ಲಿ 45 ವಿದೇಶಿಗರು ಸೇರಿದಂತೆ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದರು ಎಂಬುದು ಉಲ್ಲೇಖಾರ್ಹ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft