News

ಸಾವರ್ಕರ್ ದೇವರ ಅಸ್ತಿತ್ವ ಮತ್ತು ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿ ಪುಸ್ತಕ ಬರೆದಿದ್ದರು: ನ್ಯಾಯಾಲಯದಲ್ಲಿ ಒಪ್ಪಿಕೊಂಡ ಮೊಮ್ಮಗ ಸತ್ಯಕಿ ಸಾವರ್ಕರ್

ಪುಣೆ, ಜುಲೈ 31: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆ ವೇಳೆ, ಸ್ವತಃ ವಿನಾಯಕ ದಾಮೋದರ ಸಾವರ್ಕರ್ ಅವರೇ ದೇವರ ಅಸ್ತಿತ್ವ ಹಾಗೂ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿ ಪುಸ್ತಕ ಬರೆದಿದ್ದರು ಎಂಬ ಪ್ರಮುಖ ವಿಷಯವನ್ನು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ಅವರು ನ್ಯಾಯಾಲಯದಲ್ಲಿ ಮಂಡಿಸಿದ ಸಾಕ್ಷ್ಯಾಧಾರಗಳ ವಿಚಾರಣೆಯ ಸಂದರ್ಭದಲ್ಲಿ ಈ ವಿಚಾರ ಬಹಿರಂಗಗೊಂಡಿದ್ದು, ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ.
ನ್ಯಾಯಾಲಯದ ವಿಚಾರಣೆ ವೇಳೆ ವಕೀಲ ಮಿಲಿಂದ್ ಪವಾರ್ ಅವರು ‘ಸಾವರ್ಕರಾಂಚೆ ವಿಶ್ವಜ್ಞಾನ ವಿನಬಂಧ’ (ಸಾವರ್ಕರ್ ಅವರ ವಿಜ್ಞಾನ ಆಧಾರಿತ ಪ್ರಬಂಧಗಳು) ಎಂಬ ಪುಸ್ತಕದ ಪ್ರತಿಯನ್ನು ಪೀಠದ ಮುಂದೆ ಹಾಜರುಪಡಿಸಿದರು. ಈ ಪುಸ್ತಕದಲ್ಲಿ ಸಾವರ್ಕರ್ ಅವರು ದೇವರ ಅಸ್ತಿತ್ವ, ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳನ್ನು ತೀವ್ರವಾಗಿ ಪ್ರಶ್ನಿಸಿ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಅಲ್ಲದೆ, ಸನಾತನ ಧರ್ಮವನ್ನು ‘ನಿಸರ್ಗದ ನಿಯಮಗಳ’ ಆಧಾರದ ಮೇಲೆ ಮರು ವ್ಯಾಖ್ಯಾನಿಸಲು ಪ್ರಯತ್ನಿಸಿದ್ದರು ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.
ವಿಚಾರಣೆಯನ್ನು ಮುಂದುವರಿಸಿದ ವಕೀಲರು, ಅಲಾವುದ್ದೀನ್ ಖಿಲ್ಜಿ ಸೇರಿದಂತೆ ಹಲವು ಆಕ್ರಮಣಕಾರರು ಹಿಂದೂ ರಾಜರನ್ನು ಸೋಲಿಸಿ ದೇವಾಲಯಗಳನ್ನು ಧ್ವಂಸಗೊಳಿಸಿದಾಗ ಹಿಂದೂ ದೇವರ ಅಸ್ತಿತ್ವ ಹಾಗೂ ಶಕ್ತಿಯ ಕುರಿತು ಸಾವರ್ಕರ್ ತಮ್ಮ ಕೃತಿಯಲ್ಲಿ ಪ್ರಶ್ನಿಸಿದ್ದ ಭಾಗಗಳನ್ನು ಓದಿ ಹೇಳಿದರು. ಅಲ್ಲದೆ, ಸಮಾಜದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಕೆಲವು ಅನಗತ್ಯ ಧಾರ್ಮಿಕ ಆಚರಣೆಗಳನ್ನು ಸಾವರ್ಕರ್ ಬಹಿರಂಗವಾಗಿ ಟೀಕಿಸಿದ್ದರೆಂದು ಪ್ರತಿಪಾದಿಸಿದರು. ಈ ಎಲ್ಲಾ ವಿವರಗಳು ಸಾವರ್ಕರ್ ಅವರ ಸ್ವಂತ ಬರಹಗಳೇ ಎಂಬುದನ್ನು ಸತ್ಯಕಿ ಸಾವರ್ಕರ್ ಒಪ್ಪಿಕೊಂಡಿದ್ದಾರೆ.
ಲಂಡನ್‌ನಲ್ಲಿ ನಡೆದ ಭಾಷಣದಲ್ಲಿ ಸಾವರ್ಕರ್ ಅವರ ಕುರಿತು ನೀಡಿದ ಹೇಳಿಕೆಯನ್ನು ವಿರೋಧಿಸಿ ಸತ್ಯಕಿ ಸಾವರ್ಕರ್ ಅವರು ರಾಹುಲ್ ಗಾಂಧಿ ವಿರುದ್ಧ ಈ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪುಣೆಯ ವಿಶೇಷ ನ್ಯಾಯಾಧೀಶ ಅಮೋಲ್ ಶಿಂಧೆ ಅವರ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ವಿಚಾರಣೆ ವೇಳೆ ರಾಹುಲ್ ಗಾಂಧಿ ಪರ ವಕೀಲರು ಸಾವರ್ಕರ್ ಅವರ ಪುಸ್ತಕದ ಭಾಗಗಳನ್ನು ಉಲ್ಲೇಖಿಸಿದ್ದಕ್ಕೆ ಸತ್ಯಕಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft