ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಮತ್ತು ಸಿಜೆಪಿ ಪ್ರತಿಭಟನೆಗಳ ನಂತರ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಉನ್ನತ ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಅವರ ಸ್ಥಾನಕ್ಕೆ ನರೇಶ್ ಗಂಗ್ವಾರ್ ಅವರನ್ನು ನೂತನ ಕಾರ್ಯದರ್ಶಿಯಾಗಿ ನೇಮಿಸಿದೆ. ಈ ನಿರ್ಧಾರವು ಪರೀಕ್ಷಾ ಅಕ್ರಮಗಳ ವಿರುದ್ಧ ಸರ್ಕಾರದ ಕಟ್ಟುನಿಟ್ಟಿನ ನಿಲುವನ್ನು ಸ್ಪಷ್ಟಪಡಿಸುತ್ತದೆ. ಇದು ವಿದ್ಯಾರ್ಥಿ ಸಮುದಾಯಕ್ಕೆ ಪ್ರಬಲ ಸಂದೇಶ ರವಾನಿಸಿದೆ.
ನವದೆಹಲಿ, ಜುಲೈ 24: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET UG) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP)ಯ ಸುದೀರ್ಘ ಪ್ರತಿಭಟನೆಯ ಬೆನ್ನಲ್ಲೇ, ಕೇಂದ್ರ ಸರ್ಕಾರವು ಐಎಎಸ್ ಅಧಿಕಾರಿಗಳ ಮಟ್ಟದಲ್ಲಿ ಭಾರಿ ಬದಲಾವಣೆ ಮಾಡಿದೆ. ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ವಿನೀತ್ ಜೋಶಿ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ನರೇಶ್ ಪಾಲ್ ಗಂಗ್ವಾರ್ ಅವರನ್ನು ನೂತನ ಉನ್ನತ ಶಿಕ್ಷಣ ಕಾರ್ಯದರ್ಶಿಯಾಗಿ ನೇಮಿಸಿ ತಡರಾತ್ರಿ ಆದೇಶ ಹೊರಡಿಸಲಾಗಿದೆ.
ನೂತನ ಕಾರ್ಯದರ್ಶಿ ನರೇಶ್ ಗಂಗ್ವಾರ್ ಯಾರು?
ನರೇಶ್ ಪಾಲ್ ಗಂಗ್ವಾರ್ ಅವರು 1994 ರ ರಾಜಸ್ಥಾನ ಕೇಡರ್ನ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಯಾಗಿದ್ದಾರೆ. ಈ ಹಿಂದೆ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಕಾರ್ಯದರ್ಶಿಯಾಗಿ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ರಾಜಸ್ಥಾನ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 1992 ರ ಮಣಿಪುರ ಕೇಡರ್ ಅಧಿಕಾರಿಯಾದ ವಿನೀತ್ ಜೋಶಿ ಅವರನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.
‘ಇದು ಮೋದಿ ಗ್ಯಾರಂಟಿ’: ಬಿಜೆಪಿ ಸಂಸದ ನಿಶಿಕಾಂತ್ ದುಬೆ
ಸರ್ಕಾರದ ಈ ನಿರ್ಣಾಯಕ ನಿರ್ಧಾರವನ್ನು ಸ್ವಾಗತಿಸಿರುವ ಬಿಜೆಪಿ ಸಂಸದ ಡಾ. ನಿಶಿಕಾಂತ್ ದುಬೆ, “ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ನಿರ್ಲಕ್ಷ್ಯ ವಹಿಸಿದ ಹಿರಿಯ ಅಧಿಕಾರಿಯನ್ನೇ ಪ್ರಧಾನಿ ಮೋದಿ ಹುದ್ದೆಯಿಂದ ತೆಗೆದುಹಾಕಿದ್ದಾರೆ. ಇದು ‘ಮೋದಿ ಗ್ಯಾರಂಟಿ’. ಪರೀಕ್ಷಾ ಅಕ್ರಮದಲ್ಲಿ ಯಾವುದೇ ಹಂತದ ಅಧಿಕಾರಿಯ ನಿರ್ಲಕ್ಷ್ಯವಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದಾರೆ.
ಹಿನ್ನೆಲೆ: ಒಂದು ತಿಂಗಳ ಸುದೀರ್ಘ ಪ್ರತಿಭಟನೆ
ನೀಟ್ ಅಕ್ರಮ ಖಂಡಿಸಿ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಜೂನ್ 20 ರಿಂದ ಜಂತರ್ ಮಂತರ್ನಲ್ಲಿ ಧರಣಿ ಆರಂಭಿಸಿತು. ಪ್ರಸಿದ್ಧ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಜೂನ್ 28 ರಂದು ಪ್ರತಿಭಟನೆಗೆ ಬೆಂಬಲ ಸೂಚಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಸಿಜೆಪಿ ಹಮ್ಮಿಕೊಂಡಿದ್ದ ಸಂಸತ್ ಭವನದ ಕಡೆಗಿನ ಮೆರವಣಿಗೆಯ ವೇಳೆ ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರಿ ಘರ್ಷಣೆ ನಡೆದಿತ್ತು.
ಈ ಸುದೀರ್ಘ ಹೋರಾಟ ಹಾಗೂ ಕೇಂದ್ರ ಸರ್ಕಾರದ ಭರವಸೆಗಳ ಬೆನ್ನಲ್ಲೇ ಹಿರಿಯ ಅಧಿಕಾರಿಗಳನ್ನು ಬದಲಾಯಿಸುವ ಮೂಲಕ ಸರ್ಕಾರ ವಿದ್ಯಾರ್ಥಿ ಸಮುದಾಯಕ್ಕೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ.




