Business News

E20 ಪೆಟ್ರೋಲ್‌ನಿಂದ ಮೈಲೇಜ್ ಇಳಿಕೆ? – “3ರಿಂದ 5% ಕಡಿಮೆಯಾಗಬಹುದು ಅಷ್ಟೇ” ಎಂದು ಕೇಂದ್ರದ ಸ್ಪಷ್ಟನೆ :ಇದು ಸುಳ್ಳು ಮಾಹಿತಿ; E20 ಪೆಟ್ರೋಲ್‌ನಿಂದ ನಮ್ಮ ವಾಹನಗಳಿಗೆ ಗಂಭೀರ ಹಾನಿಯಾಗಿದೆ” -ಸಾರ್ವಜನಿಕರ ಆಕ್ರೋಶ

ಜುಲೈ 11. 2026 : ದೇಶಾದ್ಯಂತ ಜಾರಿಗೆ ಬಂದಿರುವ E20 ಪೆಟ್ರೋಲ್ ಬಳಕೆಯಿಂದ ಕೆಲವು ವಾಹನಗಳ ಮೈಲೇಜ್‌ನಲ್ಲಿ 3ರಿಂದ 5 ಶೇಕಡಾವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ. ಇತ್ತೀಚಿನ ದಿನಗಳಲ್ಲಿ E20 ಪೆಟ್ರೋಲ್‌ನಿಂದ ವಾಹನಗಳಿಗೆ ಹಾನಿಯಾಗುತ್ತದೆ ಹಾಗೂ ಮೈಲೇಜ್ ಭಾರೀ ಪ್ರಮಾಣದಲ್ಲಿ ಕುಸಿಯುತ್ತದೆ ಎಂಬ ಆತಂಕಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.

ಸಚಿವಾಲಯದ ಪ್ರಕಾರ, ಎಥನಾಲ್‌ನ ಶಕ್ತಿಮೌಲ್ಯ ಸಾಮಾನ್ಯ ಪೆಟ್ರೋಲ್‌ಗಿಂತ ಕಡಿಮೆ ಇರುವುದರಿಂದ ಕೆಲವು ವಾಹನಗಳಲ್ಲಿ ಸ್ವಲ್ಪ ಮಟ್ಟಿನ ಮೈಲೇಜ್ ಇಳಿಕೆಯಾಗಬಹುದು. ಆದರೆ ಇದರಿಂದ ಎಂಜಿನ್‌ಗೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ ಎಂದು ತಿಳಿಸಿದೆ. ಬದಲಾಗಿ E20 ಇಂಧನವು ವಾಯುಮಾಲಿನ್ಯ ಕಡಿಮೆ ಮಾಡಲು, ಕಚ್ಚಾ ತೈಲ ಆಮದು ಮೇಲಿನ ದೇಶದ ಅವಲಂಬನೆಯನ್ನು ತಗ್ಗಿಸಲು ಹಾಗೂ ದೇಶೀಯ ಎಥನಾಲ್ ಉತ್ಪಾದನೆಗೆ ಉತ್ತೇಜನ ನೀಡಲು ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.

ದೇಶದಲ್ಲಿ E20 ಜಾರಿಗೆ ಮುನ್ನ ವಾಹನ ತಯಾರಿಕಾ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಹಾಗೂ ತಜ್ಞರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಶುದ್ಧ ಪೆಟ್ರೋಲ್, E10 ಮತ್ತು E20 ಎಂಬ ಮೂರು ವಿಧದ ಪೆಟ್ರೋಲ್‌ಗಳನ್ನು ಒಂದೇ ವೇಳೆ ದೇಶಾದ್ಯಂತ ಪೂರೈಸುವುದು ಕಾರ್ಯಸಾಧ್ಯವಲ್ಲ ಎಂಬ ಕಾರಣದಿಂದ E20 ಅನ್ನು ಪ್ರಮಾಣಿತ ಇಂಧನವಾಗಿ ಮುಂದುವರಿಸಲಾಗುತ್ತಿದೆ ಎಂದೂ ಸ್ಪಷ್ಟಪಡಿಸಿದೆ.

ಮೈಲೇಜ್‌ನಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸ ಕಂಡುಬಂದರೂ, ಪರಿಸರ ಸಂರಕ್ಷಣೆ, ಇಂಧನ ಭದ್ರತೆ ಹಾಗೂ ದೇಶದ ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು E20 ನೀತಿಯನ್ನು ಮುಂದುವರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.

E20 ಪೆಟ್ರೋಲ್‌ನಿಂದ ಮೈಲೇಜ್ ಕೇವಲ 3ರಿಂದ 5 ಶೇಕಡಾ ಮಾತ್ರ ಕಡಿಮೆಯಾಗುತ್ತದೆ ಎಂಬ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಹೇಳಿಕೆಯನ್ನು ಹಲವು ವಾಹನ ಸವಾರರು ತಳ್ಳಿಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳು ಹಾಗೂ ವಿವಿಧ ವೇದಿಕೆಗಳಲ್ಲಿ ಪ್ರತಿಕ್ರಿಯಿಸಿರುವ ಕೆಲವರು, “ಇದು ಸುಳ್ಳು ಮಾಹಿತಿ. E20 ಪೆಟ್ರೋಲ್ ಬಳಕೆಯ ಬಳಿಕ ನಮ್ಮ ವಾಹನಗಳ ಮೈಲೇಜ್ ಗಣನೀಯವಾಗಿ ಕುಸಿದಿದ್ದು, ಎಂಜಿನ್ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರಿದೆ” ಎಂದು ಆರೋಪಿಸಿದ್ದಾರೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft