Business News

ಸರ್ಕಾರದ ಅನುಮತಿಯಿಲ್ಲದೇ ಕೇರಳದ ವಿಝಿಂಜಂ ಬಂದರು ಪಾಲು ಮಾರಾಟ ಮಾಡಿದ ಅದಾನಿ ಗ್ರೂಪ್! : (ವರದಿ ) ಕೇರಳ ಸರಕಾರ ಅಸಮಾಧಾನ

​ತಿರುವನಂತಪುರಂ, ಜುಲೈ 02, 2026: ವಿಝಿಂಜಂ ಇಂಟರ್ನ್ಯಾಶನಲ್ ಸೀಪೋರ್ಟ್ ಲಿಮಿಟೆಡ್‌ನಲ್ಲಿ ತನ್ನ ಒಡೆತನದ 49% ಪಾಲನ್ನು ಸ್ವಿಟ್ಜರ್ಲೆಂಡ್ ಮೂಲದ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪೆನಿಯ (MSC) ಘಟಕವಾದ ‘ಟರ್ಮಿನಲ್ ಇನ್ವೆಸ್ಟ್ಮೆಂಟ್ ಲಿಮಿಟೆಡ್’ಗೆ (TiL) ಮಾರಾಟ ಮಾಡಲು ಅದಾನಿ ಪೋರ್ಟ್ಸ್ ನಿರ್ಧರಿಸಿದೆ ಎಂಬ ವರದಿಗಳು ಹೊರಬಿದ್ದಿವೆ. ಸುಮಾರು 12,000 ಕೋಟಿ ರೂಪಾಯಿಗಳ ಮೊತ್ತದ ಈ ಒಪ್ಪಂದವು ಭಾರತದ ಬಂದರು ಮೂಲಸೌಕರ್ಯ ಕ್ಷೇತ್ರದಲ್ಲಿ ಇದುವರೆಗಿನ ಅತಿದೊಡ್ಡ ವಿದೇಶಿ ಖಾಸಗಿ ಹೂಡಿಕೆಯಾಗಿದ್ದು, ವಾಣಿಜ್ಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

​ಆದಾಗ್ಯೂ, ಈ ಪ್ರಮುಖ ಬೆಳವಣಿಗೆಯ ಬಗ್ಗೆ ಅದಾನಿ ಸಂಸ್ಥೆಯು ಕೇರಳ ಸರಕಾರಕ್ಕೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂಬ ಗಂಭೀರ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್, ಸರಕಾರಕ್ಕೆ ಈ ಒಪ್ಪಂದದ ಬಗ್ಗೆ ಪತ್ರಿಕೆಗಳ ವರದಿಗಳ ಮೂಲಕವಷ್ಟೇ ತಿಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಂಪೆನಿಯು ಯಾವುದೇ ಪತ್ರವನ್ನಾಗಲೀ ಅಥವಾ ಅಧಿಕೃತ ಮಾಹಿತಿಯನ್ನಾಗಲೀ ರಾಜ್ಯ ಸರಕಾರದೊಂದಿಗೆ ಹಂಚಿಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

​ರಿಯಾಯಿತಿ ಒಪ್ಪಂದದ ವಿಧಿ 5.3ರ ಪ್ರಕಾರ, ಸಂಬಂಧಿತ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಬಂದರಿನ ಮಾಲಕತ್ವದಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿಲ್ಲ. ಕೇರಳ ಸರಕಾರದ ಅನುಮತಿಯಿಲ್ಲದೆ ಶೇ. 25ಕ್ಕಿಂತ ಹೆಚ್ಚು ಪಾಲನ್ನು ಮಾರಾಟ ಮಾಡುವುದನ್ನು ಮಾಲಕತ್ವದ ಬದಲಾವಣೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ರಾಜ್ಯ ಸರಕಾರದ ಅಧಿಕೃತ ಅನುಮತಿ ಪಡೆಯದ ಹೊರತು ಈ ಒಪ್ಪಂದವು ಜಾರಿಯಾಗುವುದು ಅಸಾಧ್ಯ ಎಂದು ಸಿಎಂ ಸತೀಶನ್ ದೃಢವಾಗಿ ಹೇಳಿದ್ದಾರೆ.

​ವಿಝಿಂಜಂ ಅಂತಾರಾಷ್ಟ್ರೀಯ ಬಂದರು ಯೋಜನೆ ಕೇರಳ ಸರಕಾರ ಮತ್ತು ಅದಾನಿ ವಿಝಿಂಜಂ ಪೋರ್ಟ್ ಪ್ರೈವೇಟ್ ಲಿಮಿಟೆಡ್ (AVPPL) ನಡುವಿನ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಈ ಯೋಜನೆಯ ಮೊದಲ ಹಂತದಲ್ಲಿ ಕೇರಳ ಸರಕಾರ ಸುಮಾರು 5,600 ಕೋಟಿ ರೂ. ಹಾಗೂ ಅದಾನಿ ಪೋರ್ಟ್ಸ್ ಸುಮಾರು 2,500 ಕೋಟಿ ರೂ. ಹೂಡಿಕೆ ಮಾಡಿವೆ. ಇದೀಗ ಮಾಲಕತ್ವದ ಹಂಚಿಕೆಯಲ್ಲಿನ ಈ ಬದಲಾವಣೆಯು ಆರ್ಥಿಕ ಮತ್ತು ಆಡಳಿತಾತ್ಮಕವಾಗಿ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Spread the love

admin

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft