
ದೋಹಾ, ಜೂನ್ 27, 2026: ಖತರ್‌ನ ರಾಸ್ ಲಫಾನ್ ಕೈಗಾರಿಕಾ ಘಟಕದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದ ಎಂಟು ಭಾರತೀಯ ಪ್ರಜೆಗಳ ಮೃತದೇಹಗಳನ್ನು ಇಂದು ಭಾರತಕ್ಕೆ ರವಾನಿಸಲಾಗಿದೆ. ಲಫಾನ್ ಗ್ಯಾಸ್ ಕೈಗಾರಿಕಾ ಘಟಕದಲ್ಲಿ ಸಂಭವಿಸಿದ ಈ ದುರದೃಷ್ಟಕರ ಸ್ಫೋಟದಲ್ಲಿ ಒಟ್ಟು 13 ಜನರು ಮೃತಪಟ್ಟಿದ್ದು, 66 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಭಾರತೀಯ ರಾಯಭಾರ ಕಚೇರಿಯು ಎಕ್ಸ್ (ಟ್ವಿಟ್ಟರ್) ಮೂಲಕ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ಘಟನೆಯಲ್ಲಿ ಮೃತಪಟ್ಟಿದ್ದ ಒಟ್ಟು 12 ಭಾರತೀಯರ ಪೈಕಿ ಮೊದಲ ನಾಲ್ವರ ಮೃತದೇಹಗಳನ್ನು ಜೂನ್ 25ರಂದೇ ಸ್ವದೇಶಕ್ಕೆ ಕಳುಹಿಸಲಾಗಿತ್ತು. ಇದೀಗ ಉಳಿದ ಎಂಟು ಮೃತದೇಹಗಳನ್ನು ಜೂನ್ 26 ರಂದು ಭಾರತಕ್ಕೆ ರವಾನಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದೆ.
ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಈ ದುಃಖದ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಿ ಮೃತದೇಹಗಳ ರವಾನೆಗೆ ಸಂಪೂರ್ಣ ಸಹಕಾರ ನೀಡಿದ ಖತಾರ್‌ನ ಸ್ಥಳೀಯ ಅಧಿಕಾರಿಗಳಿಗೆ ಮತ್ತು ಅನಿವಾಸಿ ಭಾರತೀಯ ಸಂಘಟನೆಗಳಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದೆ. ಮೃತ ಕುಟುಂಬಗಳಿಗೆ ರಾಯಭಾರ ಕಚೇರಿಯು ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ.
ಅಲ್ಲದೆ, ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಕಾರ್ಮಿಕರ ಆರೋಗ್ಯ ವಿಚಾರಿಸಲು ಭಾರತೀಯ ರಾಯಭಾರಿ ಹಾಗೂ ರಾಯಭಾರ ಕಚೇರಿಯ ಅಧಿಕಾರಿಗಳು ಶುಕ್ರವಾರ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ವೈದ್ಯಕೀಯ ನೆರವು ಮತ್ತು ಬೆಂಬಲವನ್ನು ಖತಾರ್ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಒದಗಿಸಲಾಗುತ್ತಿದೆ ಎಂದು ರಾಯಭಾರ ಕಚೇರಿ ಭರವಸೆ ನೀಡಿದೆ.



