
ಹೈದರಾಬಾದ್, ಮೇ 23, 2026: ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಹೈ-ವೋಲ್ಟೇಜ್ ಐಪಿಎಲ್ ಪಂದ್ಯವು ಭಾರೀ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವ ಸಾಂಪ್ರದಾಯಿಕ ಕ್ಷಣದಲ್ಲಿ, ವಿರಾಟ್ ಕೊಹ್ಲಿ ಅವರು ಎಸ್‌ಆರ್‌ಹೆಚ್ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಕೈ ಚಾಚಿದ್ರೂ ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿ ಸೀದಾ ಮುಂದೆ ಸಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆಯ ಹಿನ್ನೆಲೆಯನ್ನು ನೋಡುವುದಾದರೆ, ಪಂದ್ಯದ ಮೊದಲ ಇನ್ನಿಂಗ್ಸ್‌ನಿಂದಲೇ ಇಬ್ಬರ ನಡುವೆ ಕಿರಿಕ್ ಆರಂಭವಾಗಿತ್ತು. ಸನ್‌ರೈಸರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದ್ದಾಗ ಉತ್ತಮ ಫಾರ್ಮ್‌ನಲ್ಲಿದ್ದ ಟ್ರಾವಿಸ್ ಹೆಡ್, 4ನೇ ಓವರ್‌ನಲ್ಲಿ ಬೌಲ್ಡ್ ಆಗಿ ಹೊರನಡೆದಾಗ ವಿರಾಟ್ ಕೊಹ್ಲಿ ಅತ್ಯಂತ ಆಕ್ರಮಣಕಾರಿಯಾಗಿ ವಿಕೆಟ್ ಸಂಭ್ರಮಾಚರಣೆ ಮಾಡಿದ್ದರು. ಇದಾದ ನಂತರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರ್‌ಸಿಬಿ ತಂಡವು 256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗಲೂ ಮೈದಾನದಲ್ಲಿ ಉಭಯ ಆಟಗಾರರ ನಡುವೆ ಮಾತು ಹಾಗೂ ಸನ್ನೆಗಳ ಮೂಲಕ ತೀವ್ರ ಭಿನ್ನಾಭಿಪ್ರಾಯ ಮತ್ತು ಸ್ಲೆಡ್ಜಿಂಗ್ ಮುಂದುವರಿದಿತ್ತು.
ಪಂದ್ಯದುದ್ದಕ್ಕೂ ಇಬ್ಬರ ನಡುವೆ ಉಂಟಾಗಿದ್ದ ಈ ತೀವ್ರ ಅಸಮಾಧಾನವು ಆಟ ಮುಗಿದ ಮೇಲೆಯೂ ಮುಂದುವರಿದಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿ ಅವರು ಎಸ್‌ಆರ್‌ಹೆಚ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ಅತ್ಯಂತ ಸಾಧಾರಣವಾಗಿ ಹಸ್ತಲಾಘವ ಮಾಡಿದರು. ಆದರೆ ಅವರ ನಂತರ ಬಂದ ಟ್ರಾವಿಸ್ ಹೆಡ್ ಹ್ಯಾಂಡ್ ಶೇಕ್ ಮಾಡಲು ಕೈ ಚಾಚಿದಾಗ, ಕೊಹ್ಲಿ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ನೋಡಿಯೂ ನೋಡದಂತೆ ಮುಂದೆ ಸಾಗಿ ಇಶಾನ್ ಕಿಶನ್ ಸೇರಿದಂತೆ ಇತರ ಆಟಗಾರರೊಂದಿಗೆ ಕೈ ಕುಲುಕಿದರು.
ಈ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ 55 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಹೈದರಾಬಾದ್ ನೀಡಿದ್ದ 255 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 200 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಆದಾಗ್ಯೂ, ಆರ್‌ಸಿಬಿ ತಂಡವು ಉತ್ತಮ ನೆಟ್ ರನ್‌ರೇಟ್ ಹೊಂದಿದ್ದ ಕಾರಣ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿದುಕೊಂಡು ಕ್ವಾಲಿಫೈಯರ್-1 ಪಂದ್ಯಕ್ಕೆ ಅರ್ಹತೆ ಪಡೆದಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.



