
ನವದೆಹಲಿ : ನವದೆಹಲಿಯ ಕೆಂಪುಕೋಟೆ ಬಳಿ ಸಂಜೆ 6.52ರ ಸುಮಾರಿಗೆ ಮಾರುತಿ ಇಕೋ ಕಾರು ಸ್ಫೋಟಗೊಂಡು, ಅದರ ಹಿಂದೆಯಿದ್ದ ವಾಹನಗಳು ಹಾಗೂ ಪಕ್ಕದ ಅಂಗಡಿಗಳಿಗೂ ಬೆಂಕಿ ಹರಡಿತು. ಈ ಭೀಕರ ಸ್ಫೋಟದಲ್ಲಿ ದೇಹದ ಭಾಗಗಳು 150-160 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಸುಮಾರು 10 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.
ನವದೆಹಲಿ: ನವೆಂಬರ್ 10ರಂದು ಸಂಜೆ 6.52ರ ಸಮಯ. ಎಂದಿನಂತೆ ದೆಹಲಿ ಜನರು ಗಡಿಬಿಡಿಯಲ್ಲಿ ರಸ್ತೆಗಳಲ್ಲಿ ಓಡಾಡುತ್ತಿದ್ದರು. ಐತಿಹಾಸಿಕ ಕೆಂಪುಕೋಟೆ ಬಳಿಯಲ್ಲಿರುವ ದೆಹಲಿ ಮೆಟ್ರೋ ಸಂಸ್ಥೆಯ ರೆಡ್ ಫೋರ್ಟ್ ನಿಲ್ದಾಣದ ಗೇಟ್ 1ರ ಮುಂದಿನ ರಸ್ತೆಯಲ್ಲಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಸಂಜೆ ಹೊತ್ತಾಗಿದ್ದರಿಂದ ಹೆಚ್ಚು ಟ್ರಾಫಿಕ್ ಇತ್ತು. ಹಾಗಾಗಿ, ವಾಹನಗಳು ಆ ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದವು.
ಸಂಜೆ ಸರಿಯಾಗಿ 6.52ರ ಸುಮಾರಿಗೆ, ಆ ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಮಾರುತಿ ಇಕೋ ಕಾರು ಅದೇ ರಸ್ತೆಯ ತುದಿಯಲ್ಲಿದ್ದ ಗೌರಿಶಂಕರ ಹಾಗೂ ಜೈನ ದೇವಾಲಯದ ಹತ್ತಿರದಲ್ಲೇ ಇರುವ ರೆಡ್ ಸಿಗ್ನಲ್ ಬಳಿ ಬಂದು ನಿಂತಿತು. ಅದರಲ್ಲಿನ ಡ್ರೈವರ್ ಕಾರನ್ನು ಸ್ಲೋ ಮಾಡಿದ ಕೂಡಲೇ ಇದ್ದಕ್ಕಿದ್ದಂತೆ ಇಡೀ ಕಾರು ಸ್ಫೋಟಗೊಂಡಿತು. ಅದರ ಹಿಂದೆ, ಮುಂದೆ, ಅಕ್ಕ, ಪಕ್ಕ ಇದ್ದ ಕಾರುಗಳು ಸಹ ಜಖಂ ಆದವು ಅಷ್ಟೇ ಅಲ್ಲ, ಆ ಸ್ಫೋಟ ಸಂಭವಿಸಿದ ಕೂಡಲೇ ಕಾರು ಧಗಧಗನೆ ಹೊತ್ತಿ ಉರಿಯಿತಲ್ಲದೆ, ಹಿಂದೆ ಮುಂದೆ ಜಖಂ ಆಗಿದ್ದ ಕಾರಿಗೂ ಬೆಂಕಿ ವ್ಯಾಪಿಸಿಕೊಂಡು ಆ ಕಾರುಗಳಿಗೂ ಬೆಂಕಿ ತಗುಲಿತು. ಅಷ್ಟೇ ಅಲ್ಲ, ಆ ರಸ್ತೆಯ ಪಕ್ಕದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಕಾರುಗಳೂ ಸಹ ಜಖಂಗೊಂಡು ಆ ಕಾರುಗಳೂ ಹೊತ್ತಿಕೊಂಡು ಉರಿದವು.
150-160 ಮೀಟರ್ ದೂರದವರೆಗೆ ದೇಹಗಳ ಬಿಡಿಭಾಗಗಳು ಹರಡಿದೆ.ಸ್ಫೋಟದ ರಭಸಕ್ಕೆ ಸ್ಥಳದಲ್ಲಿದ್ದ ಮೃತರ ದೇಹಗಳ ಭಾಗಗಳು 150-160 ಮೀಟರ್ ದೂರದವರೆಗೆ ಹೋಗಿ ಬಿದ್ದಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಕೆಂಪುಕೋಟೆ ಮೆಟ್ರೋ ಬಳಿಯೇ ಇದ್ದ ಅಂಗಡಿಗಳೊಳಗೆ ಮನುಷ್ಯರ ಕೈ, ಕಾಲುಗಳು ಬಂದು ಬಿದ್ದಿವೆ. ಅಕ್ಕಪಕ್ಕದ ರಸ್ತೆಗಳಲ್ಲಿ ತಲೆ, ಕೈ, ಕಾಲುಗಳು ಹಾಗೂ ದೇಹಗಳ ಇತರ ಭಾಗಗಳು ಬಂದು ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದರ ಪರಿಣಾಮ, ಸ್ಫೋಟಗೊಂಡಿದ್ದ ಕಾರಿನಲ್ಲಿದ್ದವರು, ಅದರ ಹಿಂದೆ ಮುಂದಿದ್ದ ಕಾರುಗಳಲ್ಲಿದ್ದವರು, ರಸ್ತೆಯ ಪಕ್ಕದಲ್ಲಿ ಫುಟ್ ಪಾತ್ ಮೇಲೆ ಓಡಾಡುತ್ತಿದ್ದವರು.. ಹೀಗೆ ಹತ್ತಾರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ರಾತ್ರಿ 9ರ ಸುಮಾರಿಗೆ ಇದೇ ಘಟನೆಯಲ್ಲಿ 10 ಮಂದಿ ಸಾವಿಗೀಡಾಗಿರುವ ವಿಚಾರ ಬಂದಿದೆ. ಗಾಯಗೊಂಡವರನ್ನು ದೆಹಲಿಯ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಎನ್ಐಎ, ದೆಹಲಿ ಪೊಲೀಸರ ಬಾಂಬ್ ನಿಷ್ಕ್ರಿಯ ದಳ ಮುಂತಾದ ಪಡೆಗಳು ಆಗಮಿಸಿ ಸ್ಥಳದಲ್ಲಿ ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದವು.



