
ನವದೆಹಲಿ, ನವೆಂಬರ್ 12: ಭಾರತದ ಸುಪ್ರೀಂ ಕೋರ್ಟ್ ಬಾಡಿಗೆದಾರರು ಮತ್ತು ಆಸ್ತಿ ಮಾಲೀಕರ ಹಕ್ಕುಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ. ಈ ತೀರ್ಪಿನ ಪ್ರಕಾರ, ಯಾವುದೇ ಬಾಡಿಗೆದಾರನಿಗೂ ಆ ಆಸ್ತಿಯ ಮಾಲೀಕತ್ವವನ್ನು ಕಾನೂನುಬದ್ಧವಾಗಿ ಹಕ್ಕು ಹೇಳುವ ಅಧಿಕಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮಹಾರಾಷ್ಟ್ರದ ಪುಣೆಯೊಂದರ ಬಾಡಿಗೆ ವಿವಾದ ಪ್ರಕರಣದ ವಿಚಾರಣೆಯ ವೇಳೆ ಈ ತೀರ್ಪು ಹೊರಬಿದ್ದಿದೆ. ಪ್ರಕರಣದಲ್ಲಿ ಬಾಡಿಗೆದಾರನು ಹಲವು ವರ್ಷಗಳಿಂದ ಆ ಮನೆಯಲ್ಲಿ ವಾಸಿಸುತ್ತಿದ್ದ ಹಿನ್ನೆಲೆ ಆಸ್ತಿಯ ಮಾಲೀಕತ್ವವನ್ನು ತನ್ನದಾಗಿ ಘೋಷಿಸಲು ಕೋರಿದ್ದ. ಆದರೆ ನ್ಯಾಯಾಲಯವು ಈ ವಾದವನ್ನು ತಳ್ಳಿಹಾಕಿ, “ಬಾಡಿಗೆ ಒಪ್ಪಂದವು ಸ್ವಾಮ್ಯವನ್ನು ನೀಡುವುದಿಲ್ಲ. ಬಾಡಿಗೆಯು ಕೇವಲ ವಾಸದ ಹಕ್ಕು, ಮಾಲೀಕತ್ವವಲ್ಲ” ಎಂದು ಸ್ಪಷ್ಟ ಅಭಿಪ್ರಾಯ ನೀಡಿದೆ.ನ್ಯಾಯಮೂರ್ತಿ ಹಿರಣ್ಮಯ ಭಟ್ಟಾಚಾರ್ಯ ನೇತೃತ್ವದ ಪೀಠವು ನೀಡಿದ ಈ ತೀರ್ಪಿನಲ್ಲಿ, ಮಾಲೀಕರು ಕಾನೂನಿನ ಪ್ರಕಾರ ಬಾಡಿಗೆ ಒಪ್ಪಂದವನ್ನು ರದ್ದುಪಡಿಸಿದರೆ ಅಥವಾ ಆಸ್ತಿಯನ್ನು ಮರಳಿ ಪಡೆಯಲು ಹಕ್ಕು ಚಲಾಯಿಸಿದರೆ, ಬಾಡಿಗೆದಾರನು ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಈ ತೀರ್ಪು ದೇಶದಾದ್ಯಂತ ಸಾವಿರಾರು ಬಾಡಿಗೆ ವಿವಾದಗಳಿಗೆ ಮಾದರಿಯಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬಾಡಿಗೆ ಮತ್ತು ಮಾಲೀಕತ್ವದ ನಡುವಿನ ಗಡಿ ಸ್ಪಷ್ಟಗೊಳಿಸಿರುವುದರಿಂದ, ಮಾಲೀಕರಿಗೂ ಕಾನೂನು ರಕ್ಷಣೆಯ ಭರವಸೆ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ,ಬಾಡಿಗೆ ಒಪ್ಪಂದವು ವಾಸದ ಹಕ್ಕು ಮಾತ್ರ ನೀಡುತ್ತದೆ. ಬಾಡಿಗೆದಾರನು ಯಾವುದೇ ಸಂದರ್ಭದಲ್ಲೂ ,ಅವನು 50-60 ವರ್ಆಷಗಳ ಕಾಲ ಬಾಡಿಗೆ ನೀಡಿದರೂ, ಆ ಆಸ್ತಿಯ ಮಾಲೀಕತ್ವವನ್ನು ಹಕ್ಕು ಹೇಳಲು ಸಾಧ್ಯವಿಲ್ಲ.ಮಾಲೀಕರು ಕಾನೂನು ಪ್ರಕ್ರಿಯೆಯ ಮೂಲಕ ಆಸ್ತಿಯನ್ನು ವಾಪಸ್ ಪಡೆಯಬಹುದು.ಈ ತೀರ್ಪಿನಿಂದ ದೇಶದ ಬಾಡಿಗೆ ಕಾನೂನಿನ ಸ್ಪಷ್ಟತೆ ಮತ್ತಷ್ಟು ಬಲಗೊಂಡಿದೆ.



